ಕರಾವಳಿ

ಜಾಗದ ವಿವಾದ!.. : ಚೂರಿಯಿಂದ ಇರಿದು ಯುವಕನ ಕೊಲೆ – ಇಬ್ಬರು ಆರೋಪಿಗಳ ಸೆರೆ

Pinterest LinkedIn Tumblr

murder_ujire_arest2

ಬೆಳ್ತಂಗಡಿ, ಡಿಸೆಂಬರ್.1 : ಜಾಗದ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿ ಯೋರ್ವನನ್ನು ಚೂರಿಯಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಪೇಟೆಯ ಎಸ್.ಆರ್. ಬಾರ್ ಮುಂಭಾಗ ತಡರಾತ್ರಿ ನಡೆದದಿದ್ದು, ಪ್ರಕರಣ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಕೊಲೆಯಾದ ವ್ಯಕ್ತಿಯನ್ನು ಅಣ್ಣು(35) ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ ಠಾಣಾ ಎಸ್.ಐ. ರವಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳಾದ ವೆಂಕಟೇಶ್(30) ಹಾಗೂ ಗಿರೀಶ್(29) ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ರಾತ್ರಿ ಸುಮಾರು ೧೦:೩೦ರ ಸುಮಾರಿಗೆ ಘಟನೆ ನಡೆದಿದ್ದು, ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ಅಣ್ಣು ಮತ್ತು ಆರೋಪಿಗಳಾದ ವೆಂಕಟೇಶ್, ಗಿರೀಶ್ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಗೊಂಡಿದೆ.

ಆರೋಪಿಗಳಿಗೂ ಕೊಲೆಯಾದ ಅಣ್ಣುವಿಗೂ ಜಾಗದ ವಿಚಾರಕ್ಕೆ ಸಂಬಂಧಿಸಿ ವೈಷಮ್ಯವಿದ್ದು ಇದೇ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿನಿತ್ಯ ಬಾರ್‌ನಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ನಿನ್ನೆಯೂ ಮದ್ಯ ಸೇವಿಸಲು ಬಂದಿದ್ದ ಆರೋಪಿಗಳು ಮತ್ತು ಅಣ್ಣು ಬಾರ್ ಮುಂಭಾಗ ಗಲಾಟೆ ನಡೆಸಿದ್ದರು. ಈ ವೇಳೆ ಇತರರು ಗಲಾಟೆ ನಿಲ್ಲಿಸುವಂತೆ ಹೇಳಿದ್ದು, ಅಷ್ಟರಲ್ಲಿ ಮೊದಲೇ ತಯಾರಾಗಿ ಇಟ್ಟುಕೊಂಡಿದ್ದ ಹರಿತವಾದ ಚೂರಿಯನ್ನು ಹೊರತೆಗೆದ ಆರೋಪಿಗಳು ಅಣ್ಣುವಿನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಅಣ್ಣುವನ್ನು ನೆಲಕ್ಕೆ ಉರುಳಿಸಿ ಕಿಬ್ಬೊಟ್ಟೆ, ಹೊಟ್ಟೆ, ಎದೆಯ ಭಾಗಕ್ಕೆ ಚೂರಿಯಿಂದ ಹತ್ತಾರು ಬಾರಿ ಇರಿದ ಆರೋಪಿಗಳು ಅಲ್ಲಿಂದ ಜಾಗ ಖಾಲಿ ಮಾಡಲು ನೋಡಿದ್ದಾರೆ.

ಈ ವೇಳೆ ಸ್ಥಳೀಯರು ಬೆಳ್ತಂಗಡಿ ಠಾಣಾ ಎಸ್.ಐ. ರವಿ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ಉಜಿರೆ ಜನಾರ್ಧನ ದೇವಸ್ಥಾನದ ಎದುರಿನ ಆಶ್ವತಕಟ್ಟೆ ಬಳಿಯಿಂದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಭೀರ ಗಾಯಗೊಂಡಿದ್ದ ಅಣ್ಣುವನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಹಳೆಯ ವೈಷಮ್ಯದಿಂದ ಕೃತ್ಯ ನಡೆದಿದೆ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Comments are closed.