
ಪುತ್ತೂರು, ನ.25: ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್ ಪ್ರಕರಣದ ಇನ್ನೋರ್ವ ಆರೋಪಿಯನ್ನು ಪ್ರಕರಣ ನಡೆದು ಒಂದು ವರ್ಷಗಳ ಬಳಿಕ ಪುತ್ತೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಸಮೀಪದ ಕುಂಬ್ಳೆ ನಿವಾಸಿ ರಮೀಝ್ ರಾಜ್ ಯಾನೆ ಫಯಜ಼್ (23) ಎಂದು ಗುರುತಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳ ೬ರಂದು ಪುತ್ತೂರು ಮುಖ್ಯರಸ್ತೆಯ ರಾಜಧಾನಿ ಜ್ಯುವೆಲ್ಲರ್ಸ್ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಆರು ಮಂದಿ ಆರೋಪಿಗಳು ಭಾಗಿಯಾಗಿದ್ದರು. ಇವರಲ್ಲಿ ಐದು ಮಂದಿ ಆರೋಪಿಗಳಾದ ಆಸೀರ್, ಅಲಿ ಅಲಿಯಾಸ್ ಮುನ್ನಾ, ಅನ್ವರ್ ಹಾಗೂ ಕಾಲಿಯಾ ರಫೀಕ್ ರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದ ಬಳಿಕ ದುಬೈಗೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ ಅರೋಪಿ ರಮೀಝ್ ರಾಜ್ ಬಂಧನದೊಂದಿಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ. ಶೂಟೌಟ್ ಸಂದರ್ಭ ರಮೀಝ್ರಾಜ್ ಬೈಕ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ.
ದುಬೈನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಕುಂಬ್ಳೆ ನಿವಾಸಿ ರಮೀಝ್ರಾಜ್ ಬುಧವಾರ ದುಬೈಯಿಂದ ಚೈನೈ ಮೂಲಕ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಠಾಣಾ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ಭಟ್, ಪ್ರಶಾಂತ್ ರೈ, ನಾರಾಯಣ್ ಹಾಗೂ ಮತ್ತಿತ್ತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು
್
Comments are closed.