ಕರಾವಳಿ

ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು : ಮಾರಾಕಾಯುಧ ಸಹಿತಾ ಆರೋಪಿ ಸೆರೆ

Pinterest LinkedIn Tumblr

arrest

ಮಂಗಳೂರು, ನ. 23: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕನಗರದ ಬಳಿಯಲ್ಲಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 10ರಂದು ಬೆಳಗ್ಗೆ ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕ ನಗರದ ದೈವಸ್ಥಾನದ ಬಳಿಯಲ್ಲಿ ಮಾರಕಾಯುಧಗಳನ್ನು ಹಿಡಿದು ದರೋಡೆ ಮಾಡುವ ಸಂಚು ರೂಪಿಸುತ್ತಿದ್ದ ಸಮಯ ಉರ್ವ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾರಾಕಾಯುಧಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿ ಅಶೋಕನಗರದ ಚಂದು ಯಾನೆ ಚಂದ್ರಹಾಸ ಶೆಟ್ಟಿ (36) ಎಂಬಾತ ತಲೆಮರೆಸಿಕೊಂಡಿದ್ದನು. ಈತನ ಬಗ್ಗೆ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಇಂದು ಮಧ್ಯಾಹ್ನ ಮಂಗಳೂರು ನಗರದ ಕೊಟ್ಟಾರದ ಬಳಿಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಆರೋಪಿ ಚಂದು ಯಾನೆ ಚಂದ್ರಹಾಸ ಶೆಟ್ಟಿಯ ವಿರುದ್ಧ ಈ ಹಿಂದೆ 2004ರಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, 2008ರಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, 2009ರಲ್ಲಿ ಸುನೀಲ್ ಎಂಬಾತನ ಕೊಲೆ ಪ್ರಕರಣ, 2012ರಲ್ಲಿ ಪೂರ್ವಾ ಪೊಲೀಸ್ ಠಾಣೆಯಲ್ಲಿ ಬಿಜೈ ರಾಜಾ ಶೈಲೇಶ್ ಎಂಬಾತನ ಕೊಲೆ ಪ್ರಕರಣ, 2015ರಲ್ಲಿ ಉರ್ವಾ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಯತ್ನ ಪ್ರಕರಣಗಳು ದಾಖಲಾಗಿವೆೆ. ಈತನು ರೂಢೀಕೃತ ಅಪರಾಧಿಯಾಗಿದ್ದರಿಂದ ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿದ್ದು, ಸುಮಾರು ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Comments are closed.