ಕರಾವಳಿ

ಅಹಿತಕರ ಘಟನೆಗಳ ಹಿನ್ನೆಲೆ : ಇಂದಿನಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೂ ಸೆಕ್ಷನ್ 144 ನಿಷೇಧಾಜ್ಞೆ ಜಾರಿ

Pinterest LinkedIn Tumblr

144_section_press

ಮಂಗಳೂರು, ನ. 13: ಕಳೆದ ಕೆಲವು ದಿನಗಳಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆಯನ್ನು ಹೊರಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿ ಶನಿವಾರ ರಾತ್ರಿಯಿಂದಲೇ ಈ ಎರಡು ಠಾಣಾ ವಾಪ್ತಿಯಲ್ಲಿ ಸೆ.144 ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಇದೀಗ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೂ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ.ಇಂದು ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 16ರ ರಾತ್ರಿ 10 ಗಂಟೆಯ ವರೆಗೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.144 ನಿಷೇಧಾಜ್ಞೆ ಜಾರಿಗೊಳ್ಳಲಿದೆ ಎಂದವರು ಹೇಳಿದರು.

ನಿಷೇಧಾಜ್ಞೆಯಂತೆ ಸಾರ್ವಜನಿಕ ಸಭೆ, ಸಮಾರಂಭಗಳು, ಪ್ರತಿಭಟನೆಗಳು ಸಹಿತ ಜನರು ಗುಂಪು ಸೇರುವುದಕ್ಕೆ ಅವಕಾಶಗಳಿಲ್ಲ. ಆಯುಧಗಳನ್ನು ಹೊಂದುವುದು, ಕರ ಪತ್ರಗಳನ್ನು ಹಂಚುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುವ ಬರಹಗಳನ್ನು ಹಾಕುವವರ ಮೇಲೆ ನಿಗಾ ವಹಿಸಲಾಗಿದೆ.

ಆದರೆ, ಮದುವೆ ಸಮಾರಂಭ, ಎಟಿಎಂಗಳಲ್ಲಿ ಸರದಿ ಸಾಲು ನಿಲ್ಲಲು ನಿಷೇಧಾಜ್ಞೆ ಅಡ್ಡಿಯಾಗದು. ಜನರಿಗೆ ತೊಂದರೆಯಾಗದಂತೆ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಈ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಕಮಿಷನರ್ ವಿವರಿಸಿದರು.

ಡಿಸಿಪಿಗಳಾದ ಕೆ.ಎಮ್ ಶಾಂತರಾಜು ಹಾಗೂ ಡಾ.ಸಂಜೀವ. ಎಮ್.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.