ಕರಾವಳಿ

ಬಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟನೆ

Pinterest LinkedIn Tumblr

vruksh_vatika_photo_1

  ಆಯುರ್ವೇದ ಅಭಿವೃದ್ಧಿಗೆ ಸಾಮಾಜಿಕ ಕೊಡುಗೆ ಸಲ್ಲಲಿ: ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ

ಮಂಗಳೂರು: ಶ್ರೀ ಕಾಶೀಮಠ ಸಂಸ್ಥಾನದ ಯತಿಪರಂಪರೆಯಲ್ಲಿ ಅನೇಕ ಯತಿವರ್ಯರು ಸೇರಿದಂತೆ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರಿಗಿದ್ದ ತೀವ್ರ ಆಸಕ್ತಿಯನ್ನು ಹಂಚಿಕೊಂಡಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸಂಸ್ಥಾನದ ವತಿಯಿಂದ ಆಯುರ್ವೇದ ಮೂಲಿಕಾವನವೊಂದನ್ನು ಬೆಳೆಸಿ ಆಯುರ್ವೇದದ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮಹದಾಸೆ ಹೊಂದಿದ್ದರು. ಗುರುಗಳ ಆಯುರ್ವೇದ ಕುರಿತ ಅದಮ್ಯ ಆಸಕ್ತಿ ಮತ್ತು ಅದರ ದಕ್ಷತೆಯ ಕುರಿತ ಅಚಲ ನಂಬಿಕೆಯ ಹಿನ್ನೆಲೆಯಲ್ಲಿ ತಪೋಭೂಮಿಯಾಗಿರುವ ಬಾಗಮಂಡಲದಲ್ಲಿ ಆಯುರ್ವೇದ ವೃಕ್ಷ ವಾಟಿಕಾ ಅನಾವರಣಗೊಂಡಿದೆ.

ಆಯುರ್ವೇದ ಪದ್ಧತಿಯ ಅನುಷ್ಠಾನದ ಜತೆಗೆ ಸಂಬಂಧಿತ ಔಷದೀಯ ಸಸ್ಯ, ಮೂಲಿಕೆಗಳ ಹೆಚ್ಚಿನ ಅಧ್ಯಯನ, ಸಂಶೋಧನೆ ಹೀಗೆ ಸಮಾಜದಿಂದ ಜವಾಬ್ದಾರಿಯುತ ಚಟುವಟಿಕೆಗಳು ನಡೆದು ಆಯುರ್ವೇದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು ಎಂದು ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು. ಅವರು ರವಿವಾರ ಬಾಗಮಂಡಲದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ನಿರ್ಮಾಣಗೊಂಡ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

vruksh_vatika_photo_2 vruksh_vatika_photo_3 vruksh_vatika_photo_4 vruksh_vatika_photo_5 vruksh_vatika_photo_6 vruksh_vatika_photo_7 vruksh_vatika_photo_8 vruksh_vatika_photo_9 vruksh_vatika_photo_10

ಬಾಗಮಂಡಲದಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಉದ್ಘಾಟಿಸುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀಮಠಾಧೀಶರಾಗಿ ತಮ್ಮ ಮೊದಲ ಯೋಜನೆಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.

ಕಾಞಂಗಾಡು ಮೊಕ್ಕಾಂನಿಂದ ಬಾಗಮಂಡಲಕ್ಕೆ ಚಿತ್ತೈಸಿದ ಶ್ರೀಗಳವರು ವಾಟಿಕಾದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆದಿದ್ದ ಹವನಾದಿಗಳ ನಂತರದಲ್ಲಿನ ಧನ್ವಂತರಿ ಹವನದ ಪೂರ್ಣಾಹುತಿಯನ್ನು ನೆರವೇರಿಸಿದರು. ಬಳಿಕ ವಾಟಿಕಾದ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಗೋಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸವನ್ನು ನೀಡಿದ ಶ್ರೀಗಳವರು ಆಡಳಿತ ಮಂಡಳಿಯ ಕಛೇರಿಯನ್ನೂ ಉದ್ಘಾಟಿಸಿದರು. ಆಯುರ್ವೇದ ವಾಟಿಕಾದ ಆವರಣದಲ್ಲಿರುವ ನೂತನ ಮಂಟಪದಲ್ಲಿ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಮೃಣ್ಮಯ ಮೂರ್ತಿಯನ್ನು ಪಾಮರಿ ಹೊದಿಸಿ ಅಲಂಕರಿಸಿ ಅಲ್ಲಿ ತಮ್ಮ ಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದುಕೆಗಳನ್ನಿರಿಸಿ ಮಂಗಳಾರತಿ ಬೆಳಗುವ ಮೂಲಕ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾಟಿಕಾದ ಉದ್ಘಾಟನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು.

ಇದಕ್ಕೂ ಮೊದಲು ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸಜೀವ ಸಮಾಧಿ ಹೊಂದಿದ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಿಂದ ತಂದಿದ್ದ ಪ್ರಸಾದವನ್ನು ಮೂರ್ತಿ ಸ್ಥಾಪನೆಗೂ ಮೊದಲು ಶ್ರೀಗಳವರು ಪೀಠ ಸ್ಥಳಕ್ಕೆ ಸಮರ್ಪಿಸಿದರು.

ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಪಿ.ದಯಾನಂದ ಪೈ ವಾಟಿಕಾದ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ಸೇವಾ ರೂಪದಲ್ಲಿ ಸಂಸ್ಥಾನಕ್ಕೆ ಸಮರ್ಪಿಸಿರುವುದನ್ನು ಪ್ರಕಟಿಸಿ ಮುಂದಿನ ದಿನಗಳಲ್ಲಿ ಇಲ್ಲಿ ಆಯುರ್ವೇದಕ್ಕೆ ಸಂಬಂಧಿಸಿ ಯೋಗ್ಯ ಅಧ್ಯಯನ ಕೇಂದ್ರ, ತಜ್ಞರುಗಳು ಉಳಿದುಕೊಳ್ಳಲು ವಸತಿಗೃಹಗಳು ಹೀಗೆ ಅಭಿವೃದ್ಧಿ ಕುರಿತು ತಮ್ಮ ಆಸಕ್ತಿಯನ್ನು ವಿವರಿಸಿ ಇದಕ್ಕೆ ತಗಲಬಹುದಾದ ಸುಮಾರು 8 ಕೋಟಿ ರೂ ವೆಚ್ಚವನ್ನು ಭರಿಸಿ ಯೋಜನೆಯನ್ನು ನನಸಾಗಿಸಲು ತಾವು ಸೇವಾ ಉತ್ಸುಕರಾಗಿರುವುದಾಗಿ ತಿಳಿಸಿದರು.

ರಾಧಾಕೃಷ್ಣ ಭಕ್ತ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀ ಹರಿಗುರು ದಯೆಯಿಂದ ಎರಡು ತಿಂಗಳ ಅವಧಿಯಲ್ಲಿ ಶ್ರೀಮದ್ ಭುವನೇಂದ್ರ ಆಯುರ್ವೇದ ವೃಕ್ಷ ವಾಟಿಕಾ ಮೂಡಿ ಬಂದಿದೆ ಎಂದರು. ಯೋಜನೆಯ ಎಂಜಿನಿಯರ್ ಹೆಚ್. ಗಜಾನನ ಕಾಮತ್ ವಾಟಿಕಾದ ಗಿಡಮೂಲಿಕೆಗಳ ಕುರಿತು ವಿವರಿಸಿದರು.
ಬಾಗಮಂಡಲ ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ಡಾ. ಜಗನ್ನಾಥ ಶೆಣೈ ಶ್ರೀಗಳವರನ್ನು ಪಾದಪೂಜೆಯೊಂದಿಗೆ ಗೌರವಿಸಿ ಸ್ವಾಗತಿಸಿದರು. ಕೋಟೇಶ್ವರ ದಿನೇಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.