ಕರಾವಳಿ

ಮಂಗಳೂರಿನಲ್ಲಿ ಹೆಚ್ಚುವರಿ ಪೀಠ ಆರಂಭ : ಇನ್ನು ಮುಂದೆ ಗ್ರಾಹಕರ ವ್ಯಾಜ್ಯಗಳಿಗೆ ಶೀಘ್ರ ಪರಿಹಾರ

Pinterest LinkedIn Tumblr

court_new_peeta_1

ಮಂಗಳೂರು, ನವೆಂಬರ್.4: ನಗರದ ಮಣ್ಣಗುಡ್ಡೆಯಲ್ಲಿಂದು ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಹೆಚ್ಚುವರಿ ಪೀಠ ಆರಂಭಗೊಂಡಿದೆ. ಕೆಲ ವರ್ಷಗಳಿಂದ ಇತ್ಯರ್ಥವಾಗದೇ ಉಳಿದ ಗ್ರಾಹಕರ ವ್ಯಾಜ್ಯಗಳಿಗೆ ತ್ವರಿತವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಕಾನೂನು ನೆರವು ಆಯೋಗದ ನಿರ್ದೇಶನದಡಿಯಲ್ಲಿ ಆರಂಭಗೊಂಡಿರುವ ಈ ಹೆಚ್ಚುವರಿ ಪೀಠದಿಂದ 2012ರಿಂದ 2014ರವರೆಗಿನ 318 ಪ್ರಕರಣಗಳು ಆರು ತಿಂಗಳೊಳಗೆ ಪರಿಹಾರ ನೀಡುವ ಭರವಸೆ ಮೂಡಿದೆ.

court_new_peeta_2

ವೇದಿಕೆಯ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷೆ ಸಿ.ವಿ. ಶೋಭಾ ಅವರು ಮಾತನಾಡಿ, 2010ರಿಂದ 2016ರವರೆಗೆ ಗ್ರಾಹಕರ ವೇದಿಕೆಯಲ್ಲಿ 721 ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಇವುಗಳಲ್ಲಿ 2012ರಿಂದ 2014ರವರೆಗಿನ 318 ಪ್ರಕರಣಗಳನ್ನು ಹೆಚ್ಚುವರಿ ಪೀಠಕ್ಕೆ ವಹಿಸಲಾಗುವುದು. ಇದರಿಂದ ಹಳೆಯ ಪ್ರಕರಣಗಳು ಬೇಗ ಇತ್ಯರ್ಥವಾಗುವುದು. ಜೊತೆಗೆ ಹೊಸ ಪ್ರಕರಣಗಳು ತ್ವರಿತವಾಗಿ ಪರಿಹಾರ ಕಾಣಲು ಸಾಧ್ಯವಾಗುತ್ತದೆ..ಜಿಲ್ಲೆಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 2012ರಿಂದ 2014ರವರೆಗಿನ ಒಟ್ಟು 318 ಪ್ರಕರಣಗಳನ್ನು ಹೆಚ್ಚುವರಿ ಪೀಠವು ಆರು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸಲು ರಾಜ್ಯ ವೇದಿಕೆಯು ನಿರ್ದೇಶನ ನೀಡಿದೆ ಎಂದರು.

court_new_peeta_3

ಜಿಲ್ಲಾ ವಕೀಲರ ಸಂಘ ಎಸ್. ಪಿ. ಚೆಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುವರಿ ಪೀಠಕ್ಕೆ ಚಾಲನೆ ದೊರೆಯುವ ಮೂಲಕ ಸಾಕಷ್ಟು ಕಾಲದ ಬೇಡಿಕೆ ಈಡೇರಿದಂತಾಗಿದೆ. ತಂತ್ರಜ್ಞಾನಗಳು, ಉತ್ಪನ್ನಗಳು ಹೆಚ್ಚಿದಂತೆಲ್ಲಾ ಗ್ರಾಹಕರ ಸಮಸ್ಯೆಗಳೂ ಹೆಚ್ಚುತ್ತವೆ. ಹೀಗಾಗಿ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಆದರೆ ಈ ನ್ಯಾಯಾಲಯದಲ್ಲಿ ಸಿಬ್ಬಂದಿ ಕೊರತೆ ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಪರಿಹಾರಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಅದರಲ್ಲೂ ಜಿಲ್ಲೆಯ ಜನರು ಅತ್ಯಂತ ಜಾಗರೂಕರಾಗಿರುವುದರಿಂದ ಸಮಸ್ಯೆಗಳ ಬಗ್ಗೆ ಗ್ರಾಹಕ ನ್ಯಾಯಾಲಗಳ ಮೂಲಕ ಪರಿಹಾರಕ್ಕೆ ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಕ್ಷಿಪ್ರವಾಗಿ ವಿಲೇ ಮಾಡುವುದು ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ವಕೀಲರ ಸಂಘ ನಾಲ್ಕೈದು ವರ್ಷಗಳಿಂದ ರಾಜ್ಯ ಆಯೋಗಕ್ಕೆ ಪತ್ರ ಬರೆದಿದ್ದು, ತಕ್ಷಣ ಸ್ಪಂದಿಸಿದೆ. ಹೈಕೋರ್ಟ್ನ ಸಂಚಾರಿ ಪೀಠದಂತೆ ರಾಜ್ಯದ ಗ್ರಾಹಕ ನ್ಯಾಯಾಲಯದ ಸಂಚಾರಿ ಪೀಠವೂ ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ ಎಂದು ಹೇಳಿದರು.

ಇಂದಿನಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಹಾಗೂ ಸಂಜೆ 3ರಿಂದ 5 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿರುವ ಹೆಚ್ಚುವರಿ ಪೀಠದ ಮೂಲಕ ಇತ್ಯರ್ಥಗೊಳಿಸಲು ನಿಗದಿಪಡಿಸಲಾಗಿದೆ.

ಹೆಚ್ಚುವರಿ ಪೀಠದ ಅಧ್ಯಕ್ಷ ವಿಶ್ವೇಶ್ವರ ಭಟ್, ಸದಸ್ಯ ರಾಜಶೇಖರ್, ವೇದಿಕೆಯ ಸದಸ್ಯೆ ಲಾವಣ್ಯ ಎಂ. ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಹಿರಿಯ ಸಿಬ್ಬಂದಿ ಅನಸೂಯ ಕಾರ್ಯಕ್ರಮ ನಿರೂಪಿಸಿದರು.

Comments are closed.