ರಾಷ್ಟ್ರೀಯ

ಬುಡಕಟ್ಟು ಜನಾಂಗದ ಮಕ್ಕಳ ಆಶ್ರಮ ವಸತಿ ಶಾಲೆಯಲ್ಲಿ ನಡೆದಿದೆ ಭಯಾನಕ ಕೃತ್ಯ ! 12 ಬಾಲಕಿಯರ ಮೇಲೆ ಶಿಕ್ಷಕರಿಂದ ನಿರಂತರ ಅತ್ಯಾಚಾರ: ಮೂವರು ಗರ್ಭಿಣಿಯರು

Pinterest LinkedIn Tumblr

delhi-rape

ಮುಂಬೈ: ಬುಡಕಟ್ಟು ಜನಾಂಗದ ಮಕ್ಕಳ ಆಶ್ರಮ ವಸತಿ ಶಾಲೆಯೊಂದರಲ್ಲಿ 12 ಅಪ್ರಾಪ್ತ ಬಾಲಕಿಯರ ಮೇಲೆ ಶಾಲಾ ಶಿಕ್ಷಕರೇ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬುಲ್‌ದಾನ್‌ ಜಿಲ್ಲೆಯಲ್ಲಿರುವ ಪೊಕ್ರೆ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಒಳಾಗಿರುವವರಲ್ಲಿ ಮೂವರು ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಕ್ರೆ ಶಾಲೆಯ ಮುಖ್ಯ ಶಿಕ್ಷಕ, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಲಾಗಿದೆ.

ಘಟನೆಯ ವಿವರ: ಈ ಬುಡಕಟ್ಟು ಆಶ್ರಮ ಶಾಲೆಯಲ್ಲಿ 35 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 12 ವಿದ್ಯಾರ್ಥಿನಿಯರು 12 ರಿಂದ 14 ವರ್ಷದೊಳಗಿನವರಾಗಿದ್ದು ಇವರ ಮೇಲೆ ಶಿಕ್ಷಕರು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ.

ಪ್ರಕರಣ ಬಯಲಾಗಿದ್ದು ಹೇಗೆ?
ದೀಪಾವಳಿ ರಜೆ ಇದ್ದುದರಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯರು ತಮ್ಮ ಊರಿಗೆ ತೆರಳಿದ್ದಾರೆ. ಈ ವೇಳೆ ಬಾಲಕಿಯರು ಹೊಟ್ಟೆ ನೋವು ಮತ್ತು ಹೊಟ್ಟೆ ಭಾರವಾಗುತ್ತಿದೆ ಎಂದು ಪೋಷಕರ ಬಳಿ ಹೇಳಿದ್ದಾರೆ. ಅವರು ಬಾಲಕಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ವಿಷಯ ತಿಳಿಸಿದ್ದಾರೆ.

ಈ ಆಘಾತಕಾರಿ ಸುದ್ದಿ ತಿಳಿದ ಪೋಷಕರು ಆಶ್ರಮ ಶಾಲೆಯ ಶಿಕ್ಷಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

Comments are closed.