ಮಂಗಳೂರು : ‘ಯಕ್ಷಗಾನವಿಂದು ದೇಶ – ವಿದೇಶಗಳಲ್ಲಿ ಖ್ಯಾತಿವೆತ್ತ ಕಲೆ. ಇತ್ತೀಚೆಗೆ ಬೇರೆ ಬೇರೆ ಸಂಘಟನೆಗಳು ಸರಣಿ ಬಯಲಾಟ ಮತ್ತು ತಾಳಮದ್ದಳೆಗಳನ್ನು ಏರ್ಪಡಿಸುತ್ತಿವೆ. ಇದರಿಂದ ಯಕ್ಷಗಾನದ ಜನಪ್ರಿಯತೆ ಹೆಚ್ಚಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕರ್ನಾಟಕ ಯಕ್ಷಭಾರತಿ ಪುತ್ತೂರು ಮತ್ತು ಎಸ್.ಡಿ.ಎಮ್. ಎಜ್ಯುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಇದೇ ನವೆಂಬರ 6 ರಿಂದ 12 ರ ವರೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿರುವ ನಾಲ್ಕನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2016’ ಇದರ ಕರೆಯೋಲೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಯಕ್ಷಾಂಗಣದ ಕಾರ್ಯಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರು ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿ ಪದಾಧಿಕಾರಿಗಳಿಗೆ ಹಂಚಿದರು. ಪ್ರಧಾನ ಕಾರ್ಯದರ್ಶಿ ಡಾ. ದಿನಕರ ಎಸ್. ಪಚ್ಚನಾಡಿ ಕೋಶಾಧಿಕಾರಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ಎ. ಶಿವಾನಂದ ಕರ್ಕೇರ, ಕಾರ್ಯದರ್ಶಿಗಳಾದ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ಕೆ. ಲಕ್ಷ್ಮೀ ನಾರಾಯಣ ರೈ ಹರೇಕಳ ಹಾಗೂ ಕಾರ್ಯಕಾರಿಣಿ ಸದಸ್ಯರಾದ ಸುಧಾಕರ ರಾವ್ ಪೇಜಾವರ ಮತ್ತು ಶೋಭಾಕೇಶವ ಕಣ್ಣೂರು ಉಪಸ್ಥಿತರಿದ್ದರು.
ಈ ಬಾರಿಯ ಸಪ್ತಾಹದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಎ.ಜೆ. ಶೆಟ್ಟಿ. ಸಮ್ಮಾನ ‘ಎ.ಜೆ. ಅಭಿನಂದನ’ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರ ನಾಯಕ ಪಾತ್ರ ಕೇಂದ್ರಿತ ‘ಸುಂದರ ಅರ್ಥ ಸರಣಿ’, ಈಚೆಗೆ ನಿಧನರಾದ ಯಕ್ಷವಿದ್ಯಾವಾಚಸ್ಪತಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಸ್ಮರಣೆ ‘ವಿಶ್ವನಾಥ ಸಂಸ್ಮರಣೆ’ ಹಾಗೂ ಯಕ್ಷಗಾನ ರಂಗದ ಹಿರಿಯ ಸಾಧಕರ ‘ಸರಣಿ ಸಂಸ್ಮರಣೆ’ ನಡೆಯಲಿದೆ ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.
ಯಕ್ಷಗಾನದ ಏಳು ಜನಪ್ರಿಯ ಪ್ರಸಂಗಗಳನ್ನು ಆಯ್ದುಕೊಂಡು ನವೆಂಬರ 6 ರಿಂದ ಪ್ರತಿದಿನ ಸಾಯಂಕಾಲ ಗಂಟೆ 5.00 ಕ್ಕೆ ಕ್ರಮವಾಗಿ ಸುಂದರ ಕೌಶಿಕ, ಸುಂದರ ಭರತ, ಸುಂದರ ಕಾಂಡ, ಸುಂದರ ಕೃಷ್ಣ, ಸುಂದರ ಭೀಷ್ಮ, ಸುಂದರ ಕರ್ಣ ಮತ್ತು ಸುಂದರ ಸುಧನ್ವ ಎಂಬ ಹೆಸರಿನಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರನ್ನು ಕಲೆಹಾಕಿ ‘ಸುಂದರ ಅರ್ಥ ಸರಣಿ’ಯನ್ನು ಸಾದರ ಪಡಿಸಲಾಗುವುದು ಎಂದವರು ಪ್ರಕಟಿಸಿದರು.
Comments are closed.