ಉಡುಪಿ: ದೀಪಾವಳಿಯ ರಜೆಯ ಮಜಾದಲ್ಲಿದ್ದ ಬಾಲಕನೋರ್ವ ಸ್ನೇಹಿತರ ಜೊತೆ ಈಜಲು ಹೊಳೆಗೆ ತೆರಳಿದ್ದು ಕಾಲುಜಾರಿ ನದಿಗೆ ಬಿದ್ದು ನೀರುಪಾಲಾದ ಘಟನೆ ಕುಂದಾಪುರ ತಾಲೂಕಿನ ಬೇಳೂರು ಎಂಬಲ್ಲಿ ನಡೆದಿದೆ. ಬೇಳೂರು ನಿವಾಸಿ ಶ್ರೇಯಸ್(13) ನೀರುಪಾಲಾದ ದುರ್ದೈವಿ.







ಶನಿವಾರ ದೀಪಾವಳಿ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ಶ್ರೇಯಸ್ ತನ್ನಿಬ್ಬರು ಸ್ನೇಹಿತರ ಜೊತೆಗೆ ಮನೆ ಸಮೀಪದಲ್ಲಿರುವ ಹಿರಿಹೊಳೆ ಎನ್ನುವ ಹೆಸರಿನ ನದಿಗೆ ಈಜಲು ತೆರಳಿದ್ದಾರೆ. ಮೂವರು ಈಜಾಟ ಮುಗಿಸಿ ಮೇಲಕ್ಕೆ ಬಂದಿದ್ದು ಪುನಃ ಕಾಲು ತೊಳೆಯಲು ನದಿಗೆ ಇಳಿದ ಶ್ರೇಯಸ್ ಆಯತಪ್ಪಿ ನೀರಿಗೆ ಬಿದ್ದು ಮುಳುಗಿದ್ದಾರೆ. ಈ ವೇಳೆ ಈತನ ಜೊತೆ ತೆರಳಿದ್ದ ಇನ್ನಿಬ್ಬರು ಬಾಲಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಶನಿವಾರ ಸಂಜೆ ವೇಳೆ ಹುಲ್ಲು ಕುಯ್ಯಲು ಬಂದ ಸ್ಥಳೀಯರೊಬ್ಬರು ನದಿ ದಡದಲ್ಲಿದ್ದ ಬಟ್ಟೆಗಳು ಹಾಗೂ ಒಂದು ಜೊತೆ ಚಪ್ಪಲಿ ಕಂಡು ಎಲ್ಲರಿಗೂ ಮಹಿತಿ ನೀಡಿದ್ದು ಬೆಳಿಗ್ಗೆನಿಂದ ಮನೆಗೆ ಬಾರದ ಶ್ರೇಯಸ್ ಬಟ್ಟೆಯಾದ ಕಾರಣ ಆತ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ.
ಕೂಡಲೇ ಸ್ಥಳೀಯರು ನೀರಿನಲ್ಲಿ ಹುಡುಕಾಟ ನಡೆಸಿದ್ದು ಸಾಧ್ಯವಾಗದ ಹಿನ್ನೆಲೆ ಕುಂದಾಪುರ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು, ಅವರು ಸ್ಥಳಕ್ಕಾಗಮಿಸಿ ನೀರಿನಲ್ಲಿ ಹುಡುಕಿದ್ದು ಬಾಲಕನ ಶವ ಸಿಕ್ಕಿದೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ ಶ್ರೇಯಸ್ ಬೇಳೂರು ಶಾಲೆಯಲ್ಲಿ 8 ನೇತರಗತಿ ವ್ಯಾಸಂಗ ಮಾಡುತ್ತಿದ್ದ.
ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.