ಕರಾವಳಿ

ಹುಲ್ಲಿನ ಮನೆಯ ಬಡವ ಕಟ್ಟಿಕೊಂಡ ಶೌಚಾಲಯಕ್ಕೂ ಅನುದಾನ ನೀಡದ ನಾಡಾ ಗ್ರಾಮಪಂಚಾಯತ್

Pinterest LinkedIn Tumblr

ಉಡುಪಿ: ಇಲ್ಲೊಂದು ಬಡಕುಟುಂಬ. ಹಲವು ವರ್ಷಗಳಿಂದಲೂ ಹುಲ್ಲಿನ ಮನೆಯಲ್ಲಿಯೇ ಇವರ ವಾಸ. ಅದ್ಯೇಗೋ ಸಾಲ ಮಾಡಿಯೂ ಒಂದು ಶೌಚಾಲಯ ನಿರ್ಮಿಸಿಕೊಳ್ತಾರೆ. ಆದರೇ ಅದಕ್ಕೆ ಗ್ರಾಮಪಂಚಾಯತ್ ನೀಡಬೇಕಾದ ಅನುದಾನ ಮಾತ್ರ 2 ವರ್ಷವಾದ್ರೂ ನೀಡಿಲ್ಲ. ಇವರ ಕಷ್ಟಕ್ಕೆ ಕೊನೆಯೇ ಇಲ್ಲವಾಗಿದೆ. ಈ ಬಗ್ಗೆ ಒಂದು ಸಣ್ಣ ಸ್ಟೋರಿಯಿಲ್ಲಿದೆ.

kundapura_nada_hullinamane-4 kundapura_nada_hullinamane-3 kundapura_nada_hullinamane-2 kundapura_nada_hullinamane-1

ಇದು ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಹಡವು ಗ್ರಾಮ. ನರಸಿಂಹ ದೇವಾಡಿಗ ಎನ್ನುವವರು ಹಡವು ಭಾಗದಲ್ಲಿ ಹುಲ್ಲಿನ ಮನೆಯೊಂದನ್ನು ನಿರ್ಮಿಸಿಕೊಂಡು ತನ್ನ ಕುಟುಂಬದೊಂದಿಗೆ ಹಲವು ವರ್ಷಗಳಿಂದಲೂ ಜೀವನ ಸಾಗಿಸ್ತಿದ್ದಾರೆ. ಕೂಲಿ ಕಾರ್ಯಗಳನ್ನು ಮಾಡಿಕೊಂಡು ಸಂಸಾರದ ನಿರ್ವಹಣೆ ಮಾಡುತ್ತಿರುವ ಕುಟುಂಬ ಇದೀಗಾ ಗ್ರಾಮಪಂಚಾಯತಿ ಮಾಡಿದ ಅನ್ಯಾಯಕ್ಕೆ ನಿತ್ಯ ಹಿಡಿಶಾಪ ಹಾಕ್ತಿದ್ದಾರೆ. ಹೌದು….ಕಳೆದ ಎರಡು ವರ್ಷಗಳ ಹಿಂದೆ ನರಸಿಂಹ ದೇವಾಡಿಗರು ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಬಗ್ಗೆ ನಾಡಾ ಗ್ರಾಮಪಂಚಾಯತಿಗೆ ಮನವಿಯನ್ನು ನೀಡುತ್ತಾರೆ. ಅದರಂತೆಯೇ ಆ ಮನವಿ ಪುರಸ್ಕ್ರತಗೊಂಡು ನರಸಿಂಹ ದೇವಾಡಿಗರು ಫಲಾನುಭವಿ ಎಂದು ಮಂಜೂರಾತಿಯೂ ಸಿಗುತ್ತದೆ. ನರಸಿಂಹ ಅವರು ಮನೆಯ ಹಿಂಭಾಗದಲ್ಲಿ ಕ್ರಮಬದ್ಧವಾದ ಶೌಚಾಲಯ ನಿರ್ಮಾಣ ಕಾರ್ಯ ಮಾಡಿ ಈ ಬಗ್ಗೆ ಗ್ರಾಮಪಂಚಾಯತಿಗೂ ಹಂತಹಂತದ ಕಾಮಗಾರಿ ಬಗ್ಗೆ ವಿವರ ನೀಡುತ್ತಾರೆ. ಆದರೇ ಗ್ರಾಮಪಂಚಾಯತ್ ಮಾತ್ರ ಶೌಚಾಲಯ ನಿರ್ಮಾಣಕ್ಕೆ ನೀಡಬೇಕಾದ 12 ಸಾವಿರ ಅನುದಾನ ಮಾತ್ರ ಈವರೆಗೂ ನೀಡದೇ ಸತಾಯಿಸುತ್ತಿದೆ.

ನರಸಿಂಹ ದೇವಾಡಿಗರು ಹುಲ್ಲಿನಮನೆ ನಿರ್ಮಿಸಿಕೊಂಡು ವಾಸವಿರುವ ಸ್ಥಳವು ವ್ಯಾಜ್ಯದಲ್ಲಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದೇನೇ ಇದ್ದರೂ ಆ ಸ್ಥಳದಲ್ಲಿ ನರಸಿಂಹ ದೇವಾಡಿಗರು ವಾಸ್ತವ್ಯವಿರುವ ಬಗ್ಗೆ ಸಂಪೂರ್ಣ ದಾಖಲೆಗಳಿವೆ, ಪಡಿತರ ಚೀತಿ, ಆಧಾರ್ ಕಾರ್ಡ್, ಗುರುತಿನ ಚೀಟಿ ಎಲ್ಲವೂ ಸಮರ್ಪಕವಾಗಿದ್ದಲ್ಲದೇ ಮನೆಗೆ ನರಸಿಂಹ ದೇವಾಡಿಗರ ಹೆಸರಿನಲ್ಲಿಯೇ ವಿದ್ಯುತ್ ಸಂಪರ್ಕದ ಎನ್.ಓ.ಸಿ. ಕೂಡ ನೀಡಲಾಗಿದೆ. ಇಷ್ಟೆಲ್ಲಾ ಪೂರಕ ದಾಖಲೆಗಳ ನಡುವೆಯೂ ಗ್ರಾಮಪಂಚಾಯತ್ ಮಾತ್ರ ಎರಡು ವರ್ಷ ಕಳೆದರೂ ಇವರಿಗೆ ನೀಡಬೇಕಾದ ಶೌಚಾಲಯ ನಿರ್ಮಾಣದ ಅನುದಾನ ಹಣ ನೀಡುತ್ತಿಲ್ಲ. ಶೌಚಾಲಯ ನಿರ್ಮಾಣದ ವೇಳೆ ಹಣಕ್ಕೆ ಅಡಚಣೆಯಾಗಿ ನರಸಿಂಹ ಅವರು ಚಿನ್ನ ಅಡವಿಟ್ಟು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಇನ್ನು ಮನೆಯು ಕೂಡ ಪುರಾತನ ಕಾಲದ್ದಾಗಿದ್ದು ಹಾವು ಚೇಳುಗಳ ಭಯದ ನಡುವೆಯೇ ಇವರ ನಿತ್ಯ ಬದುಕು ಸಾಗುತ್ತಿದೆ. ಈ ಹಿಂದೆ ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಇವರ ಮನೆಗೆ ಭೇಟಿ ನೀಡಿದ್ದಲ್ಲದೇ ಅನುದಾನ ಹಣ ನೀಡ್‌ಉವಂತೆ ನಾಡಾ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದರೂ ಕೂಡ ಇವರ ಮಾತಿಗೂ ಕಿಮ್ಮತ್ತಿಲ್ಲದಾಗಿದೆಯಂತೆ. ಈ ಬಗ್ಗೆ ನಾಡಾ ಗ್ರಾಮಪಂಚಾಯತಿ ಯಾವುದೋ ಪೂರ್ವಾಗ್ರಹ ಪೀಡಿತವಾಗಿ ವರ್ತಿಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಬಯಲು ಶೌಚಾಲಯ ಮುಕ್ತ ಜಿಲ್ಲೆಯೆಂಬ ಖ್ಯಾತಿ ಪಡೆದ ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಬಡವನೊಬ್ಬ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಕೂಡ ಅನುದಾನ ನೀಡದೇ ಸತಾಯಿಸುವ ಗ್ರಾಮಪಂಚಾಯತಿ ಕಾರ್ಯವೈಖರಿ ನಿಜಕ್ಕೂ ಅಮಾನವೀಯವಾಗಿದೆ. ಇನ್ನಾದರೂ ಸಂಬಂದಪಟ್ಟಾವರು ಅದನ್ನು ದೊರಕಿಸಿಕೊಡುವಲ್ಲಿ ಮುಂದಾಗುವರೇ ಕಾದುನೋಡಬೇಕಿದೆ.

Comments are closed.