ಕರಾವಳಿ

ಶರೀಅತ್ ಕಾನೂನಿನ ಬಗ್ಗೆ ಹಸ್ತಕ್ಷೇಪ ಅಗತ್ಯವಿಲ್ಲ : ಸರಕಾರದ ನಡೆಗೆ ಮುಸ್ಲಿಮ್ ಸಂಘಟನೆಗಳ ವಿರೋಧ

Pinterest LinkedIn Tumblr
muslim_committi_meet_1
ಮಂಗಳೂರು, ಅ.27: ಕೇಂದ್ರ ಸರಕಾರವು ಇಸ್ಲಾಂ ಧರ್ಮದ ಶರೀಅತ್ ಕಾನೂನಿನ ಬಗ್ಗೆ ಹಸ್ತಕ್ಷೇಪ ಮಾಡಿ ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅಫಿದಾವಿತ್ ಸಲ್ಲಿಸಿದೆ ಎಂದು ಆರೋಪಿಸಿರುವ ದ.ಕ. ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳು, ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿವೆ.
ವಿವಿಧ ಮುಸ್ಲಿಮ್ ಸಂಘಟನೆಗಳು ಇಂದು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮಾತನಾಡಿದರು. ದೇಶದ ಸಂವಿಧಾನವು ಎಲ್ಲಾ ಧರ್ಮಗಳಿಗೆ ಧಾರ್ಮಿಕ ಸ್ವಾತಂತ್ರ ನೀಡಿ ಬೇರೆ ಬೇರೆ ಧರ್ಮಗಳಿಗೆ ಅನುಸಾರವಾಗಿ ಧಾರ್ಮಿಕ ಆಚರಣೆಗೆ ಮನ್ನಣೆ ನೀಡಿದೆ. ಇದರಲ್ಲಿ ನ್ಯಾಯಾಲಯ ಅಥವಾ ಸರಕಾರ ಹಸ್ತಕ್ಷೇಪ ಮಾಡುವುದಕ್ಕೆ ಮುಸ್ಲಿಂ ಸಮುದಾಯಗಳ ವಿರೋಧವಿದೆ ಎಂದು ಅವರು ಹೇಳಿದರು.
muslim_committi_meet_2 muslim_committi_meet_3 muslim_committi_meet_4 muslim_committi_meet_5
ಶರೀಅತ್ ಕಾನೂನಿಗೆ ಹಸ್ತಕ್ಷೇಪ ಮಾಡುವ ಉದ್ದೇಶದಿಂದಲೇ ತಲಾಖ್ ವಿಚಾರವನ್ನು ಮಧ್ಯೆ ತರಲಾಗಿದೆ. ತಲಾಖ್ನಲ್ಲಿ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸಲು ಧರ್ಮಗುರುಗಳಿದ್ದಾರೆ. ಶರೀಅತ್ ಕಾನೂನಿನಿಂದ ಅನ್ಯಾಯವಾಗಿದೆ ಎಂದು ನಮ್ಮಲ್ಲಿ ಬಂದಲ್ಲಿ ನಾವು ನ್ಯಾಯಬದ್ಧವಾಗಿ ಬಗೆಹರಿಸಲು ಬದ್ಧರಿದ್ದೇವೆ. ಅದು ಬಿಟ್ಟು ಈ ರೀತಿ ಕಾನೂನಿಗೆ ಹಸ್ತಕ್ಷೇಪ ಮಾಡುವುದನ್ನು ಯಾವುದೇ ಕಾರಣಕ್ಕೆ ಒಪ್ಪುವುದಿಲ್ಲ.
ಒಂದು ಕಾನೂನಿನಲ್ಲಿ ದುರುಪಯೋಗ ಆಗುತ್ತಿದೆ ಎಂದಾದರೆ ಅದು ಕಾನೂನಿನ ತಪ್ಪಲ್ಲ ಎಂದವರು ಸ್ಪಷ್ಟಪಡಿಸಿದರು. ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಆಕ್ಷೇಪವಿಲ್ಲ. ಆದರೆ ಶರೀಅತ್ ಕಾನೂನಿನ ಬಗ್ಗೆ ಹಸ್ತಕ್ಷೇಪ ಅಗತ್ಯವಿಲ್ಲ ಎಂದವರು ಹೇಳಿದರು.
ಇಸ್ಲಾಂ ಧರ್ಮದಲ್ಲಿ ವಿಚ್ಛೇದನ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರಿಗೂ ವಿಚ್ಛೇದನ ಪಡೆಯಲು ಖುಲಾ ಎಂಬ ಪದ್ಧತಿ ಧರ್ಮದಲ್ಲಿದೆ ಎಂದವರು ತಿಳಿಸಿದರು.
ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶಾದ್ಯಂತ ಎಲ್ಲಾ ಮುಸ್ಲಿಂ ಸಂಘಟನೆಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸುವಂತೆ ಕರೆ ನೀಡಿದೆ. ಇದಕ್ಕೆ ಪೂರಕವಾಗಿ ಮುಸ್ಲಿಂ ಪುರುಷರು ಮತ್ತು ಮಹಿಳೆಯರ ಸಹಿ ಸಂಗ್ರಹ ಮಾಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಈ ಬಗ್ಗೆ ಎಲ್ಲಾ ರಜ್ಯಗಳ ಇಸ್ಲಾಂ ವಿದ್ವಾಂಸರ ಹಾಗೂ ಮುಖಂಡರನ್ನು ಸಂಪರ್ಕಿಸಿ ವಿರೋಧಿಸುವಂತೆ ಕರೆ ನೀಡಿದೆ. ಇದಕ್ಕೆ ಪೂರಕವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷತೆಯಲ್ಲಿ ಉಭಯ ಜಿಲ್ಲೆಗಳ ಎಲ್ಲಾ ಮುಸ್ಲಿಂ ಸಂಘಟನೆಗಳ ಸಭೆ ಇತ್ತೀಚೆಗೆ ನಡೆದು ಚರ್ಚಿಸಿ ಉಭಯ ಜಿಲ್ಲೆಗಳಲ್ಲಿ ಸಹಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದವರು ನುಡಿದರು.
ಸಮಾನ ನಾಗರಿಕ ಸಂಹಿತೆ ಎಂಬುದು ಅಪ್ಪಟ ರಾಜಕೀಯ ಪ್ರೇರಿತ. ಕೇಂದ್ರರ ಸರಕಾರವು ತನ್ನ ಆಡಳಿತದಲ್ಲಿನ ವಿಫಲತೆಯನ್ನು ಮರೆಮಾಚಲು ಮಾಡಿರುವ ಷಡ್ಯಂತ್ರ ಎಂದು ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.
 ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜಮೀಯತುಲ್ ಫಲಾಹ್ನ ದ.ಕ. ಮತ್ತು ಉಡುಪಿ ಜಿಲ್ಲೆಯ ನಾಯಕ ಹಾಜಿ ಸಾದುದ್ದೀನ್ ಎಂ. ಸಾಲಿ, ಜಮಾಅತೆ ಇಸ್ಲಾಂನ ಹಾಜಿ ಕೆ.ಎಂ. ಶರೀಫ್, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ನ ಅಧ್ಯಕ್ಷ ಯಹ್ಯಾ ನಖ್ವಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಮಾಜಿ ಮೇಯರ್ ಕೆ. ಅಶ್ರಫ್, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಟ್ರಸ್ಟಿ ಸಯ್ಯದ್ ಅಹ್ಮದ್ ಭಾಷಾ ತಂಙಳ್, ತಕ್ವಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಪಿಎಫ್‌ಐನ ರಝಾಕ್ ಕೆಮ್ಮಾರ, ಐಕ್ಯತಾ ವೇದಿಕೆಯ ಅಧ್ಯಕ್ಷ ಹಾಜಿ ಮುಸ್ತಫ ಕೆಂಪಿ, ಅಖಿಲ ಭಾರತ ಬ್ಯಾರಿ ಪರಿಷತ್ನ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ, ಐ.ಮೊಯ್ದಿನಬ್ಬ ಹಾಜಿ, ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್, ಎಸ್ಡಿಪಿಐನ ಹನೀಫ್ ಖಾನ್, ಎಸ್ಕೆಎಸ್ಸೆಸ್ಸೆಫ್ನ ಉಪಾಧ್ಯಕ, ಉಸ್ಮಾನ್ ಅಬ್ದುಲ್ಲಾ, ಸಲಫಿ ಮೂವ್ಮೆಂಟ್ನ ಇಸ್ಮಾಯೀಲ್ ಶಾಫಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ಕೃಪೆ : ವಾರ್ತಾ ಭಾರತಿ

Comments are closed.