ಕರಾವಳಿ

ಅಕ್ಟೋಬರ್.28 : ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆ – ಪ್ರಶಸ್ತಿ ಪ್ರದಾನ

Pinterest LinkedIn Tumblr

nama_kudala_press_1

ಮಂಗಳೂರು,ಅ.25 : ಕಳೆದ ಹದಿನೇಳು ವರ್ಷಗಳಿಂದ ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಜನಜೀವನಕ್ಕೆ‌ ಒತ್ತುಕೊಡುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವ ಜಿಲ್ಲೆಯ ತುಳು ವಾರ್ತಾವಾಹಿನಿ ನಮ್ಮ ಕುಡ್ಲ ವತಿಯಿಂದ ವರ್ಷಾಂ ಪ್ರತಿಯಂತೆ ನಡೆಯುವ ನಮ್ಮ ಕುಡ್ಲ ಗೂಡುದೀಪ ಪಂಥ‌ ಅಕ್ಟೋಬರ್ 28ರಂದು ಶುಕ್ರವಾರ ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನೆರವೇರಲಿದೆ ಎಂದು ಸಂಸ್ಥೆಯ ನಿರ್ದೇಶಕ ಹರೀಶ್ ಬಿ.ಕರ್ಕೇರಾ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೀಪಾವಳಿ ಸಂದರ್ಭದಲ್ಲಿ ತುಳುನಾಡಿನ ಜನತೆ ಗೂಡುದೀಪಗಳನ್ನು ಮನೆ ಮನೆಗಳಲ್ಲಿ ರಚಿಸಿ ಬೆಳಗುತ್ತಿದ್ದು, ಆ ಪದ್ಧತಿ ನಿಧಾನವಾಗಿ ಮರೆಯಾಗುತ್ತಿರುವುದನ್ನು ಮನ ಗಂಡು ಗೂಡು ದೀಪ ರಚನೆಗೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮಕುಡ್ಲಗೂಡುದೀಪ ಸ್ಪರ್ಧೆಯನ್ನು‌ ಆರಂಭಿಸಲಾಯಿತು.ವರ್ಷಂಪ್ರತಿ ದೀಪಾವಳಿಯ ಸಂದರ್ಭದಲ್ಲಿ ಗೂಡುದೀಪ ಪಂಥವನ್ನು ಏರ್ಪಡಿಸಿ ಕೇಬಲ್ ಟಿವಿಯಲ್ಲಿ ಸಹಸ್ರಾರು ವೀಕ್ಷಕರು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿರುವುದು ನಮ್ಮ ಕುಡ್ಲದ‌ ಇನ್ನೊಂದು ಸಾಧನೆ ಎಂದು ಹೇಳಿದರು.

nama_kudala_press_2

ಪ್ರಥಮ ವರ್ಷದಿಂದಲೇ ಬಂಗಾರದ ಪದಕವನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತಿದ್ದು‌ ಇತ್ತೀಚಿನ ವರ್ಷಗಳಲ್ಲಿ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಿಗಳಿಗೆ ಬಂಗಾರದ ಪದಕ ನೀಡಲಾಗುತ್ತಿದೆ. ನಮ್ಮಕುಡ್ಲ ಗೂಡುದೀಪ ಪಂಥದಿಂದ ಪ್ರೇರೇಪಣೆ ಪಡೆದು ಜಿಲ್ಲೆಯ ವಿವಿಧೆಡೆ‌ ಇಂತಹ ಸ್ಪರ್ಧೆಗಳು ಸಂಯೋಜಿಸಲ್ಪಡುತ್ತಿವೆ ಎಂದರು.

ವಿಭಾಗಗಳು :
1. ಸಾಂಪ್ರದಾಯಿಕ
2. ಆಧುನಿಕ
3. ವಿಶೇಷ ಮಾದರಿ (ಪ್ರತಿಕೃತಿ- ಮೋಡೆಲ್) ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಹಾಗೂ ತೃತೀಯ ಸ್ಥಾನ ಪಡೆಯುವ ಗೂಡು ದೀಪಗಳಿಗೆ ಬೆಳ್ಳಿಯ ಪದಕವನ್ನು ಬಹುಮಾನವಾಗಿ ನೀಡಲಾಗುವುದು.

ಅತೀ ಹೆಚ್ಚು ಗೂಡುದೀಪ ತರುವ ಸಂಸ್ಥೆಗಳಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು.ಅಲ್ಲದೆ ತೀರ್ಪುಗಾರರ ಮೆಚ್ಚುಗೆ ಪಡೆದ‌ ಆಯ್ದ ಗೂಡುದೀಪಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು.ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸ್ಮರಣಿಕೆ ಮತ್ತು ಸಿಹಿ ತಿಂಡಿಯ ಪೊಟ್ಟಣವನ್ನು ವಿತರಿಸಲಾಗುವುದು.

ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆಯು ‌ಇಷ್ಟೊಂದು ಯಶಸ್ವಿಯಾಗಲು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಪ್ರೋತ್ಸಾಹ‌ ಅಪಾರ .ಕ್ಷೇತ್ರವು ವರ್ಷಂಪ್ರತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸರ್ವರಿಗೂ ಕ್ಷೇತ್ರದ ಪ್ರಸಾದವನ್ನು ನೀಡುತ್ತಾ ಬಂದಿರುತ್ತದೆ.ಕ್ಷೇತ್ರದ ಅಂಗಳದಲ್ಲಿ ಸ್ಪರ್ಧೆಯನ್ನು ನಡೆಸಲು ಮುಕ್ತ ಅವಕಾಶ ನೀಡುತ್ತಿರುವ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ‌ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.

ಕೇಂದ್ರದ ಮಾಜಿ ಮಂತ್ರಿ ಮತ್ತು ಕ್ಷೇತ್ರದ‌ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಶ್ರೀ ಬಿ.ಜನಾರ್ಧನ ಪೂಜಾರಿಯವರು ಸತತ ಪ್ರೋತ್ಸಾಹದಿಂದ ಗೂಡುದೀಪ ಸ್ಪರ್ಧೆಗೆ ‌ಅನವರತ ತುಂಬು ಹೃದಯದ ಸಹಕಾರ ನೀಡುತ್ತಾ ಸ್ಪರ್ಧೆಯು ‌ಇನ್ನಷ್ಟು ಮನಸೂರೆಗೊಳ್ಳಲು ಕಾರಣರಾಗಿರುತ್ತಾರೆ. ಅವರಿಗೂ ‌ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಹರೀಶ್ ಕರ್ಕೇರಾ ಹೇಳಿದರು.

nama_kudala_press_3

ಪ್ರಶಸ್ತಿ/ಪುರಸ್ಕಾರ

ತುಳುನಾಡಿನಲ್ಲಿ ಜನಿಸಿ ತುಳು ಮಣ್ಣಿನ ಮಹತ್ವವನ್ನು ದೇಶ ವಿದೇಶಗಳಲ್ಲಿ ಹರಡಿ ಖ್ಯಾತಿ ಪಡೆದು, ಶಿಕ್ಷಣ, ಸಂಸ್ಕೃತಿ, ಸಮಾಜ ಸೇವೆ, ಉದ್ಯಮ ರಂಗ‌ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಮಾಡಿ ನಾಡಿಗೆ ಗೌರವತಂದು ಕೊಟ್ಟ ವ್ಯಕ್ತಿಗಳಿಗೆ “ನಮ್ಮ ತುಳುವೆರ್” ಪ್ರಶಸ್ತಿಯನ್ನು ಹಾಗೂ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ “ನಮ್ಮಕುಡ್ಲ ” ಪ್ರಶಸ್ತಿಯನ್ನು ಹಾಗೂ “ನಮ್ಮಕುಡ್ಲ ಪ್ರತಿಭಾ ಪುರಸ್ಕಾರ”ವನ್ನು ಗೂಡುದೀಪ ಸ್ಪರ್ಧೆಯ ಸಂದರ್ಭದಲ್ಲಿ ನೀಡುತ್ತಾ ಬಂದಿದ್ದೇವೆ.ಈ ಬಾರಿ ಸಮಾಜ ಸೇವಕಿ ಊರ್ಮಿಳಾ ರಮೇಶ್‌ಕುಮಾರ್ (ನಮ್ಮ ತುಳುವೆರ್), ಯಕ್ಷಗಾನದ ಚಾರ್ಲಿಚಾಪ್ಲಿನ್‌ ಸೀತಾರಾಮ್ ಕಟೀಲ್ (ನಮ್ಮಕುಡ್ಲ ಪ್ರಶಸ್ತಿ), ಮತ್ತು ಸಿ.ಎ. ಸಾಧಕಿ ಯಶಸ್ವಿನಿ ಕೆ. ಅಮೀನ್ (ನಮ್ಮಕುಡ್ಲ ಪ್ರತಿಭಾ ಪುರಸ್ಕಾರ) ಅವರನ್ನು ಈ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಲಾಗಿದೆ.ಅಲ್ಲದೆ ಈ ವರ್ಷದಿಂದ ನಮ್ಮಕುಡ್ಲ ಸಂಸ್ಥಾಪಕರಾದ ದಿ. ಬಿ.ಪಿ. ಕರ್ಕೇರ‌ ಅವರ ಸ್ಮರಣಾರ್ಥ ವಿಶೇಷ ಪ್ರಶಸ್ತಿಯೊಂದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು.

kudroli-goodudeepa_2 kudroli-goodudeepa_1

ನೇರಪ್ರಸಾರ:

ಗೂಡುದೀಪ ಸ್ಪರ್ಧೆಯ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ‌ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಆರಂಭದಿಂದ ಮುಕ್ತಾಯದವರೆಗೆ ಗೂಡುದೀಪಸ್ಪರ್ಧೆಯ ವರ್ಣರಂಜಿತ ಕಾರ್ಯಕ್ರಮವು ಕರಾವಳಿಯ ಅತ್ಯಾಧಿಕ ಪ್ರಸಾರ ವ್ಯಾಪ್ತಿಯ ನಮ್ಮಕುಡ್ಲ ವಿ೪ಲೈವ್‌ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿರುವುದು. ಸಂಜೆ5.30ರಿಂದ 8ರ ತನಕ ಜಿಲ್ಲೆಯ ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ, ವೈವಿಧ್ಯಮಯ ಕಾರ್ಯಕ್ರಮಗಳು ಗೂಡುದೀಪ ವೀಕ್ಷಣೆಗೆ ಬರುವ‌ ಆಸಕ್ತರಿಗೆ ಮುದ ನೀಡಲಿವೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿರೂಪಕರಾದ ಕದ್ರಿ ನವನೀತ್ ಶೆಟ್ಟಿ ಹಾಗೂ ಬಾಸ್ಕರ್ ರೈ ಕುಕ್ಕುವಳ್ಳಿ ಪೂರಕ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಸುರೇಶ್ ಬಿ.ಕರ್ಕೇರಾ,ಮೋಹನ್ ಬಿ.ಕರ್ಕೇರಾ, ಲೀಲಾಕ್ಷ ಬಿ.ಕರ್ಕೇರಾ,ಸಂತೋಷ್ ಬಿ.ಕರ್ಕೇರಾ,ಸಕಹೆಗಾರರಾದ ಪ್ರೊ.ಎಂ.ಎಸ್. ಕೋಟ್ಯಾನ್‌, ದಯಾನಂದ ಕಟೀಲು ಮುಂತಾದವರು ಉಪಸ್ಥಿತರಿದ್ದರು.

ನಮ್ಮಕುಡ್ಲದ ಗೂಡುದೀಪ ಸ್ಪರ್ಧೆಯ ವಿವರ :

ದಿನಾಂಕ 28.10.2106 ಶುಕ್ರವಾರ ಸಂಜೆ ಗಂಟೆ 4ರಿಂದ ಸ್ಥಳ: ಶ್ರೀ ಗೋಕರ್ಣನಾಥೇಶ್ವರದೇವಸ್ಥಾನ, ಕುದ್ರೋಳಿ, ಮಂಗಳೂರು.

ಸ್ಪರ್ಧಾ ವಿಭಾಗಗಳು: 1. ಸಾಂಪ್ರದಾಯಿಕ(ಬಟ್ಟೆ /ಬಣ್ಣದಕಾಗದ/ ಗ್ಲಾಸ್ ಪೇಪರ್ ಉಪಯೋಗಿಸಿರಬೇಕು.)
2.ಆಧುನಿಕ (ನವ ಧಾನ್ಯ, ಫ್ಲೆಕ್ಸ್, ಪ್ಲಾಸ್ಟಿಕ್, ಗರಿ ಹೂ ಇತ್ಯಾದಿ ಉಪಯೋಗಿಸಬಹುದು.)
3. ವಿಶೇಷ ಮಾದರಿ(ಪ್ರತಿಕೃತಿ-ಕಲಾಚಾತುರ್ಯಕ್ಕೆ ‌ಆದ್ಯತೆ ನೀಡಲಾಗುವುದು.)

ಬಹುಮಾನಗಳು: 1. ಚಿನ್ನದ ಪದಕಗಳು -೩ ವಿಭಾಗದ ಪ್ರಥಮ, ದ್ವಿತೀಯ ವಿಜೇತರಿಗೆ.2. ಬೆಳ್ಳಿಯಪದಕಗಳು – ೩ ವಿಭಾಗದ ತೃತೀಯ ವಿಜೇತರಿಗೆ.3. ಆಕರ್ಷಕ ಬಹುಮಾನಗಳು.4. ಪ್ರಶಸ್ತಿ ಪತ್ರ.5.ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ.6. ಅತೀ ಹೆಚ್ಚು ಗೂಡು ದೀಪ ತಂದ ಸಂಸ್ಥೆಗೆ ವಿಶೇಷ ಬಹುಮಾನ.

ಸ್ಪರ್ಧೆಗಳಿಗೆ ಸೂಚನೆಗಳು: 1. ಸ್ಪರ್ಧಾಳುಗಳು ಅಕ್ಟೋಬರ್೨೮ರಂದು ಸಂಜೆ೪ ಗಂಟೆಯೊಳಗೆ ಕುದ್ರೋಳಿ ಕ್ಷೇತ್ರಕ್ಕೆ ಬಂದು ತಮ್ಮ‌ಆಯ್ಕೆಯ ವಿಭಾಗವನ್ನು ಸ್ಥಳದಲ್ಲೇ ನೊಂದಾಯಿಸಬೇಕು.2. ಗೂಡು ದೀಪಗಳನ್ನು ನೋಡಿ ವಿಭಾಗಗಳನ್ನು ನಿರ್ಣಯಿಸಲಾಗುವುದು. 3. ಗೂಡು ದೀಪಕ್ಕೆ ಬೇಕಾದ ಬಲ್ಬ್, ಹೋಲ್ಡರ್, ವಯರ್‌ಇತ್ಯಾದಿ ಸಾಮಾಗ್ರಿಗಳನ್ನು ಸ್ವತಃತರಬೇಕು ಹಾಗೂ ದೀಪಾಲಂಕಾರಕ್ಕೆ ಬೇಕಾದ ವಿದ್ಯುತ್‌ ಸಂಪರ್ಕವನ್ನು ಮಾತ್ರ‌ಒದಗಿಸಲಾಗುವುದು. 4. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.  5. ಸ್ಪರ್ಧೆಯು ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವುದರಿಂದ ಕ್ಷೇತ್ರದ ಪ್ರಾವಿತ್ರ್ಯತೆ ಕಾಪಾಡಬೇಕು. 6. ಸ್ವತಃ ತಯಾರಿಸಿದ ಗೂಡುದೀಪಗಳನ್ನು ಮಾತ್ರ ಸ್ಪರ್ಧೆಯ ಗಣನೆಗೆ ತೆಗೆದುಕೊಳ್ಳಲಾಗುವುದು. 7. ಅತೀ ಹೆಚ್ಚು ಸಂಖ್ಯೆಯ ಗೂಡುದೀಪಗಳನ್ನು ತಂದ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.8. ತೀರ್ಪುಗಾರರ ತೀರ್ಮಾನವೇ ‌ಅಂತಿಮ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ:ನಮ್ಮಕುಡ್ಲ 401, 4ನೇ ಮಹಡಿ, ಕಾಸ್ಲಿಕ್ ಆರ್ಕೇಡ್, ಕೆ. ಎಸ್. ರಾವ್‌ರಸ್ತೆ, ಮಂಗಳೂರು.

Comments are closed.