ಉಡುಪಿ: ಅದು ಜೀವನ ಮಧುರ ಪಾಲಿಸಿ. ಈ ಪಾಲಿಸಿ ಬಂದದ್ದೇ ಬಡ ಜನರು, ಕೂಲಿ ಕಾರ್ಮಿಕರಿಗಾಗಿ. ಆದ್ರೆ ಇದರಿಂದ ಬಡವರ ಜೀವನ ಮಧುರ ಆಗಿಲ್ಲ. ಬದಲಾಗಿ ಹಣ ಕಟ್ಟಿದವರು, ಹಣ ಕೊಟ್ಟವರು ಬೀದಿಗೆ ಬಂದಿದ್ದಾರೆ. ಎಲ್.ಐ.ಸಿ ಜೀವ ವಿಮಾ ನಿಗಮದ ಮೂಲಕ ನಡೆದಿರುವ ಈ ಬೃಹತ್ ಅವ್ಯವಹಾರ ಇದೀಗ ಸುದ್ದಿ ಮಾಡ್ತಾ ಇದೆ. ಏನಿದು ಮೈಕ್ರೋ ಇನ್ಸುರೆನ್ಸ್ ಪಾಲಿಸಿ? ಪಾಲಿಸಿದಾದರಿಗೆ ಏಜೆಂಟರು ಪಂಗನಾಮ ಹಾಕಿದ್ದು ಹೇಗೆ? ಅವ್ಯವಹಾರ ಬೆಳಕಿಗೆ ಬಂದಿದ್ದು ಹೇಗೆ? ಇದೆಲ್ಲಾ ಡೀಟೇಲ್ಸ್ ಇಲ್ಲಿದೆ..
ಭಾರತೀಯ ಜೀವ ವಿಮಾ ನಿಗಮ ( ಎಲ್.ಐ.ಸಿ) ಇದರ ಹೆಸರು ಕೇಳಿದವರಿಲ್ಲ. ದೇಶದಾದ್ಯಂತ ಕೋಟ್ಯಾಂತರ ಜನರು ಇದರ ಪಾಲಿಸಿದಾರರಾಗಿದ್ದಾರೆ. ಮಾತ್ರವಲ್ಲ ದೇಶದ ನಂಬರ್ ಒನ್ ಪಾಲಿಸಿ ಕಂಪೆನಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆದ್ರೆ ಇದೀಗ ಎಲ್.ಐ.ಸಿ ಮೂಲಕನೇ ಪಾಲಿಸಿದಾದರಿಗೆ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೌದು.. ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ನಿರ್ದೇಶನಾಲಯ( ಐ.ಆರ್.ಡಿ.ಎ) ಮಾರ್ಗದರ್ಶಿ ಸೂತ್ರದಂತೆ ಮೈಕ್ರೋ ಇನ್ಸುರೆನ್ಸ್ ಪಾಲಿಸಿ 2009-10ರಲ್ಲಿ ಜಾರಿಗೆ ಬಂತು. ಗ್ರಾಮೀಣ ಭಾಗದಲ್ಲಿರುವ ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಾಲಿಸಿ ಜಾರಿಗೆ ಬಂದಿತ್ತು. 15 ವರ್ಷಗಳ ಅವಧಿಗೆ 15ರಿಂದ 50 ಸಾವಿರ ವಿಮಾ ಮೊತ್ತದ ಈ ಪಾಲಿಸಿ ವಾರ್ಷಿಕ 600 ರೂ ಪ್ರೀಮಿಯಂ ಹೊಂದಿದ್ದು ಒಮ್ಮೆಲೇ ಪ್ರೀಮಿಯಂ ಕಟ್ಟಲಾಗದವರು 50 ರೂ ಮಾಸಿಕ ಕಂತುಗಳಲ್ಲಿ ಕಟ್ಟಬಹುದಾಗಿತ್ತು. ಎಲ್.ಐ.ಸಿಯ ಅಧಿಕೃತ ಏಜೆಂಟರುಗಳು ಸಬ್ ಏಜೆಂಟ್ ಗಳನ್ನು ನೇಮಿಸಿ ಈ ಪಾಲಿಸಿ ಮಾಡಿಸಿಕೊಂಡು ಹಣವನ್ನು ಪಾಲಿಸಿದಾರರಿಂದ ಪಡೆಯುತ್ತಿದ್ದರು. ಉಡುಪಿ ಎಲ್.ಐ.ಸಿಯ ವಿಭಾಗಕ್ಕೆ ಸೇರಿದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಏಜೆನ್ಸಿಗಳಾದ ಸಮನ್ವಯ, ಮುಕ್ಕಣ್ನೇಶ್ವರಿ ಯುವತಿ ಮಂಡಳಿ, ಶುಭೋದಯ ಸಂಸ್ಥೆ ಸಬ್ ಏಜೆಂಟರುಗಳನ್ನು ನೇಮಿಸಿ ಸುಮಾರು 58,086 ಜೀವನ್ ಮಧುರ ಪಾಲಿಸಿ ಮಾರಿದ್ದು ಅದರಲ್ಲಿ 57,273 ಪಾಲಿಸಿಗಳಿಗೆ ಮಾತ್ರ ಆರಂಭಿಕ ಕಂತು ಕಟ್ಟಿ ಬಾಂಡ್ ನೀಡಿದ್ದು ಉಳಿದ ಕಂತನ್ನು ಕಟ್ಟದೇ ಪಾಲಿಸಿದಾರರಿಗೆ ಪಂಗನಾಮ ಹಾಕಿದ್ದಾರೆ. ಸಬ್ ಏಜೆಂಟ್ ಗಳಿಗೆ ಅನುಮಾನ ಬಾರದೇ ಇರಲಿ ಎನ್ನುವ ಕಾರಣಕ್ಕೆ ಪಾಲಿಸಿದಾರಿಂದ ಪಡೆದ ಹಣಕ್ಕೆ ಕಮಿಷನ್ ನೀಡಿದ್ದು ಈ ಮೂರು ಏಜೆನ್ಸಿಗಳು ಎಲ್ಲಿಯೂ ಸಂಶಯ ಬಾರದ ರೀತಿಯಲ್ಲಿ ವರ್ತಿಸಿದ್ದವು.
ಜೀವನ್ ಮಧುರ ಪಾಲಿಸಿಯಲ್ಲಿ ಸಬ್ ಏಜೆಂಟರನ್ನು ಹೆಚ್ಚಾಗಿ ನೇಮಿಸಿದ್ದು ಮಹಿಳೆಯರನ್ನ ಅದರಲ್ಲೂ ಅಂಗನವಾಡಿ ಕಾರ್ಯಕರ್ತರನ್ನು. ಈ ಮೂಲಕ ಚಿಕ್ಕಮಗಳೂರಿನಲ್ಲಿ 200 ಅಧಿಕ ಸಬ್ ಏಜೆಂಟರುಗಳಿದ್ದಾರೆ. ಅದರಲ್ಲಿ 80ಶೇಕಡಾದಷ್ಟು ಮಹಿಳೆಯರೇ. ಚಿಕ್ಕಮಗಳೂರಿನ ಕಡೂರು, ತರೀಕೆರೆ,ಎನ್.ಆರ್. ಪುರದಲ್ಲೇ ಸುಮಾರು 70ರಿಂದ 80 ಲಕ್ಷ ರೂ ಸಂಗ್ರಹವಾಗಿದ್ದು ಇದನ್ನಈ ಮೂರು ಎಜೆನ್ಸಿಗಳು ಎಲ್.ಐಸಿಗೆ ಕಟ್ಟದೇ ಗುಳುಂ ಮಾಡಿದೆ. ಅಂದ ಹಾಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು 2013ರ ಜುಲೈನಲ್ಲಿ ವ್ಯಕ್ತಿಯೊಬ್ಬರು ಮೃತರಾದಾಗ. ಆಗ ಕ್ಲೈಮ್ ಗೆ ಅರ್ಜಿ ಹಾಕಿದಾಗ ಈ ಪಾಲಿಸಿ ಲ್ಯಾಪ್ಸ್ ಆಗಿದೆ ಎಂಬ ಉತ್ತರ ಬಂದಾಗ. ಬರೇ ಒಂದು ಪಾಲಿಸಿಯ ಒಂದು ಕಂತು ಕಟ್ತ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಯಿತು. ಇದಾದ ಬಳಿಕ ಎಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದಿದೆ. ಎಲ್.ಐ.ಸಿ ಯು 2011ರಲ್ಲಿ ಶುಭೋದಯ ಸಂಸ್ಥೆಯ ಅದ್ಯಕ್ಷ ಎ. ಮೋಹನ್, ಕಾರ್ಯದರ್ಶಿ ಗಿರೀಶ್, ನಿರ್ದೇಶಕ ದೇವರಾಜ್ ಇವರಿಗೆ ಒಂದೇ ದಿನ 1,310 ಪಾಲಿಸಿ ಮಾರಿದಕ್ಕಾಗಿ ಸನ್ಮಾನ ಮಾಡಿತ್ತು.ಆದ್ರೆ ಕುತೂಹಲಕಾರಿ ವಿಷಯ ಅಂದ್ರೆ ಇವರೇ ಮೂರು ಮಂದಿ ಏಜೆನ್ಸಿ ನಿರ್ಮಿಸಿ ಹಣವನ್ನು ಲಪಟಾಯಿಸಿದ್ದಾರೆ. ಇವರ ವಿರುದ್ದ 2014ರಲ್ಲಿ ತರಿಕೇರಿ, ಕಡೂರಿನಲ್ಲಿ ದೂರು ದಾಖಲಾಗಿತ್ತು. ಇದೀಗ ಸಂತ್ರಸ್ತರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ [ಪ್ರತಿಷ್ಟಾನದ ಮೊರೆ ಹೋದ ಕಾರಣ ಮಾನವ ಹಕ್ಕುಗಳ ಪ್ರತಿಷ್ಟಾನದ ಅದ್ಯಕ್ಷ ರವೀಂದ್ರನಾಥ್ ಶ್ಯಾನಭೋಗ್ ಈ ಪ್ರಕರಣದ ಬಗ್ಗೆ ಸಂತ್ರಸ್ತರ ಪರ ಹೋರಾಟಕ್ಕೆ ಇಳಿದಿದ್ದಾರೆ. ಈ ಪ್ರಕರಣದಲ್ಲಿ ಎಲ್.ಐ.ಸಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಎಲ್.ಐ.ಸಿ ಲ್ಯಾಪ್ಸ್ ಆದರೂ ಕೂಡಾ ಯಾಕೆ ಎಲ್.ಐ.ಸಿಯ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿರುವ ಶ್ಯಾನಭೋಗ್ ಇದು ಬರೇ ಉಡುಪಿ ವಲಯ ಮಾತ್ರವಲ್ಲ ಮೈಸೂರು, ಬೆಂಗಳೂರು ಸೇರಿಂದರೆ ಹಲವು ಎಲ್.ಐ.ಸಿ ವಲಯ ವ್ಯಾಪ್ತಿಯಲ್ಲಿ 100 ಕೋಟಿಗೂ ಮಿಕ್ಕಿ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದ್ದಾರೆ.
ಒಟ್ಟಿನಲ್ಲಿ ಇದೀಗ ಎಲ್.ಐಸಿ. ಜೀವನ ಮಧುರ ಪಾಲಿಸಿಯ ಅವ್ಯವಹಾರ ಪ್ರಕರಣದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದು ಸಬ್ ಎಜೆಂಟರುಗಳು ಬೀದಿಗೆ ಬಿದ್ದಿದ್ದಾರೆ. ಹಣವನ್ನು ಕೊಟ್ಟ ವ್ಯಕ್ತಿಗಳು ಸಬ್ ಏಜೆಂಟರ ಮನೆ ಬಾಗಿಲಿಗೆ ಬರುತ್ತಿದ್ದು ಸಬ್ ಏಜೆಂತರುಗಳು ಆತ್ಮಹತ್ಯೆ ಒಂದೇ ದಾರಿ ಅಂತ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅತ್ತ ಎಲ್.ಐಸಿ ಕೂಡಾ ಈ ಪ್ರಕರಣದ ಬಗ್ಗೆ ನಿರಾಸಕ್ತಿ ತೋರಿಸಿದ್ದು ಸಬ್ ಏಜೆಂತರುಗಳನ್ನು ಅತಂತ್ರಕ್ಕೆ ದೂಡಿದೆ.