ಮಂಗಳೂರು,ಅಕ್ಟೋಬರ್.22: ಕಳೆದ ಒಂದು ತಿಂಗಳಿನಿಂದ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಮಳಲಿ ಪರಿಸರದಲ್ಲಿ ಆಗಾಗ ಜೋಡಿ ಚಿರತೆಗಳು ಪ್ರತ್ಯಕ್ಷವಾಗುವ ಮೂಲಕ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಮೊದಮೊದಲು ದೂರದಲ್ಲಿ ಆಗಾಗ ಕಾಣಸಿಗುತ್ತಿದ್ದ ಜೋಡಿ ಚಿರತೆಗಳು ನಿನ್ನೆ ಮನೆಗಳಿರುವ ಪ್ರದೇಶದಲ್ಲಿ ಏಕಾಏಕಿ ಕಾಣಿಸಿಕೊಳ್ಳುವ ಮೂಲಕ ಊರವರ ಆತಂಕವನ್ನು ಹೆಚ್ಚಿಸಿದೆ. ಇದರಿಂದ ಬೇಸತ್ತ ಊರವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಗಂಜಿಮಠ ಸಮೀಪದ ದಟ್ಟ ಕಾನನದಲ್ಲಿ ಜೋಡಿ ಚಿರತೆಗಳು ಆಗಾಗ ಕಾಣಸಿಗುತ್ತಿತ್ತು. ಚಿರತೆಗಳನ್ನು ಕಂಡ ಸಾರ್ವಜನಿಕರು ಭಯದಿಂದ ಗಂಜಿಮಠಕ್ಕೆ ಹೋಗುವ ಪಥವನ್ನೇ ಬದಲಿಸಿದ್ದಾರೆ. ಗಂಜಿಮಠ ಪ್ರದೇಶದಲ್ಲಿ ಚಿಕ್ಕಪುಟ್ಟ ಪ್ರಾಣಿಗಳನ್ನು ಬೇಟೆಯಾಗಿ ಜೀವನ ಸಾಗಿಸುತ್ತಿದ್ದ ಈ ಚಿರತೆಗಳು ಮಳಲಿಯ ಕುಕ್ಕೂರಿ ಎಂಬಲ್ಲಿನ ಜನನಿಬಿಡ ಪ್ರದೇಶದಲ್ಲಿ ಕಾಣಿಸುವ ಮೂಲಕ ಊರವರ ಭೀತಿಗೆ ಕಾರಣವಾಗಿದೆ.
ಕುಕ್ಕೂರಿ ಸಮೀಪದ ಪಾಳು ಬಿದ್ದ ಮನೆಗೆ ಆಗಾಗ ಭೇಟಿ ನೀಡುವ ಚಿರತೆಗಳು ಅಲ್ಲೇ ಸಮೀಪದ ನೀರಿನ ಹಳ್ಳದಿಂದ ನೀರು ಕುಡಿದು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಕುಕ್ಕೂರಿ ಪ್ರದೇಶದ ಹಲವಾರು ಮಂದಿ ವೀಕ್ಷಿಸಿದ್ದು ಭಯಭೀತರಾಗಿದ್ದಾರೆ. ಕುಕ್ಕೂರಿಯ ಶಿವಪ್ಪ ಎನ್ನುವವರ ಮನೆ ಸಮೀಪದ ಅಡ್ಡಾಡುತ್ತಿರುವ ಚಿರತೆಗಳನ್ನು ಶಿವಪ್ಪ ಅವರ ಮನೆಯವರ ಸಹಿತ ಹಲವಾರು ಮಂದಿ ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಇದರಿಂದ ರಾತ್ರಿಯಾಗುತ್ತಿದ್ದಂತೆ ಮನೆಯವರು ಹೊರಬರಲು ಹೆದರುತ್ತಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ನಿನ್ನೆ ಸ್ಥಳೀಯರಾದ ತಮ್ಮಯ್ಯ ಎನ್ನುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಧಿಕಾರಿಗಳನ್ನು ಕರೆಸಿ ಚಿರತೆಗಳು ಅಡ್ಡಾಡುವ ಕುರಿತು ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆ ಕಾಣಿಸಿಕೊಳ್ಳುವ ಪ್ರದೇಶದ ಪರಿಶೀಲನೆ ನಡೆಸಿ ಊರವರಿಂದ ಮಾಹಿತಿ ಪಡೆದು ಬರುವ ಭಾನುವಾರ ಚಿರತೆ ಬೋನ್ ಇಡುವ ನಿರ್ಧಾರಕ್ಕೆ ಬಂದಿದ್ದಾರೆ.
ಅತ್ತ ಅರಣ್ಯಾಧಿಕಾರಿಗಳು ಕುಕ್ಕೂರಿ ಸಮೀಪ ಪರಿಶೀಲನೆ ನಡೆಸುತ್ತಿರುವಾಗಲೇ ಇತ್ತ ದೋಟ ಎಂಬ ಪ್ರದೇಶಲ್ಲಿ ಒಂಟಿ ಚಿರತೆಯೊಂದು ಅಲ್ಲಿನ ಮಹಿಳೆಯರಿಗೆ ಪ್ರತ್ಯಕ್ಷವಾಗಿ ಮಾಯವಾಯಿತು. ಈ ಬಗ್ಗೆ ಅವರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಪರಿಶೀಲನೆ ನಡೆಸಿದ್ದಾರೆ. ದೋಟ ಎಂಬಲ್ಲಿ ನೀರಿರುವ ತೆರದ ಬಾವಿಯೊಂದಿದ್ದು ಅಲ್ಲಿನ ನೀರು ಕುಡಿಯಲು ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ದೋಟ ಪ್ರದೇಶದಲ್ಲಿ ವನ್ಯಜೀವಿ ಉಡಗಳ ಸಂಸಾರವೊಂದಿದ್ದು, ಅದು ಆಗಾಗ ಓಡಾಟ ನಡೆಸುತ್ತಿದೆ. ಇದರ ಜಾಡು ಹಿಡಿದ ಚಿರತೆ ಅದನ್ನು ಸ್ವಾಹಾ ಮಾಡಲೆಂದು ಬಂದಿರಬಹುದೆನ್ನಲಾಗಿದೆ. ಯಾಕೆಂದರೆ ಜನರೆಲ್ಲಾ ಅಲ್ಲಿಂದ ತೆರಳಿದ ಮೇಲೆ ಅಲ್ಲೇ ಎಲ್ಲೋ ಅವಿತುಕೊಂಡಿದ್ದ ಉಡ ಮರೆಯಿಂದ ಎದ್ದು ಅಲ್ಲಿಂದ ತೆರಳಿರುವುದನ್ನು ಸ್ಥಳೀಯರು ಕಂಡಿದ್ದಾರೆ.
ಚಿರತೆ ಅಡ್ಡಾಡುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೋನು ಇರಿಸಲು ನಿರ್ಧರಿಸಿದ್ದು, ಭಾನುವಾರ ಸ್ಥಳೀಯರ ಸಹಕಾರದೊಂದಿಗೆ ಬೋನು ಇಡಲಿದ್ದೇವೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿರುವುದರಿಂದ ಊರವರ ಆತಂಕ ಸ್ವಲ್ಪ ಮಟ್ಟಿಗೆ ದೂರವಾಗಿದೆ.