ಕರಾವಳಿ

ವಿದ್ಯಾರ್ಥಿಯಿಂದ ಪಾಂಶುಪಾಲರ ಮೇಲೆ ಹಲ್ಲೆ : ವಿದ್ಯಾರ್ಥಿ ವಿರುದ್ಧ ಕಾನೂನು ಕ್ರಮಕ್ಕೆ ಕ್ಯಾ.ಕಾರ್ಣಿಕ್ ಒತ್ತಾಯ

Pinterest LinkedIn Tumblr

ganesh-karnik-pic

ಮಂಗಳೂರು, ಅಕ್ಟೋಬರ್.22 : ಮಂಗಳೂರಿನ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಡೆಸಿದ ಹಲ್ಲೆಯ ಪ್ರಕರಣ ಅತ್ಯಂತ ಖಂಡನಾರ್ಹವಾಗಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಗುರು ಶಿಷ್ಯರ ಬಾಂಧವ್ಯವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಛಾಪನ್ನು ಮೂಡಿಸಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಹೊತ್ತಿರುವ ಶಿಕ್ಷಕರು ಕೆಲವು ಸಂದರ್ಭದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವುದು ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಕಾಳಜಿಯಿಂದ. ಆದರೆ ಒಬ್ಬ ವಿದ್ಯಾರ್ಥಿ ತನ್ನ ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ಹಲ್ಲೆ ನಡೆಸುತ್ತಾನೆ ಎಂದಾದರೆ ಅಂತ ವಿದ್ಯಾರ್ಥಿಯ ಮೇಲೆ ಸಮಾಜ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು? ಈ ಪ್ರಕರಣ ಅತ್ಯಂತ ವಿಷಾದನೀಯ.

ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಬಂಧಿಸಿ ಇಂತಹ ಪ್ರಕರಣಗಳು ಜಿಲ್ಲೆಯ ಯಾವ ಶಿಕ್ಷಣ ಸಂಸ್ಥೆಗಳಲ್ಲೂ ಮರುಕಳಿಸದ ಹಾಗೆ ಯಾವುದೇ ಒತ್ತಡಗಳಿಗೂ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಂಡು ಮಾದರಿಯಾಗುವಂತೆ ಪೊಲೀಸ್ ಇಲಾಖೆಯನ್ನು ಹಾಗೂ ಜಿಲ್ಲಾ ಆಡಳಿತವನ್ನು ಆಗ್ರಹಿಸಿರುವುದಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.