ಬಂಟ್ವಾಳ, ಅಕ್ಟೋಬರ್.21 : ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಪೋಟಕವಿಟ್ಟು ಮೇಯಲು ದನದ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ (63) ಎಂದು ಹೆಸರಿಸಲಾಗಿದೆ. ಕರೋಪಾಡಿ ಗ್ರಾಮದ ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಯ ಉದ್ದೇಶದಿಂದ ಈತ ಸ್ಪೋಟಕ ಇಟ್ಟಿದ್ದೆನ್ನಲಾಗಿದೆ.
ಘಟನೆ ವಿವರ : ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯ ಅವರಿಗೆ ಸೇರಿದ 4 ವರ್ಷದ ಹಸು ನಿತ್ಯ ಗುಡ್ಡಕ್ಕೆ ತೆರಳಿ ಹುಲ್ಲು ಮೇದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಹಿಂತಿರುಗುತ್ತಿತ್ತು. ಸೋಮವಾರ ಬೆಳಗ್ಗೆ ಚೆಲ್ಲಂಗಾರು ಗುಡ್ಡಕ್ಕೆ ತೆರಳಿದ ದನ ಸಂಜೆಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ರಾಧಾಕೃಷ್ಣ ಹಾಗೂ ಅವರ ತಾಯಿ ಅಪ್ಪಿ ಮೈದಾನದ ಭಾಗಕ್ಕೆ ಹೋಗಿ ಹುಡುಕಾಡುವ ಸಂದರ್ಭ ಮರದ ಕೆಳಗೆ ಹಸು ಮುಖ ಛಿದ್ರವಾಗಿ ರಕ್ತ ಇಳಿಸುತ್ತಾ ನಿಂತುಕೊಂಡಿರುವುದು ಕಾಣಿಸಿದೆ. ಹಸು ಗುಡ್ಡಕ್ಕೆ ತೆರಳಿದ ವೇಳೆ ಸ್ಫೋಟಕ ಸಿಡಿದು ದನದ ಮುಖ ಛಿದ್ರವಾಗಿತ್ತು.
ಕೂಡಲೇ ಮನೆಯವರ ಸಹಾಯದೊಂದಿಗೆ ಹಸುವನ್ನು ಗುಡ್ಡದಿಂದ ಮನೆಗೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡಲಾಯಿತು.ಆದರೆ ಸ್ಪೋಟಕದಿಂದ ಹಸುವಿನ ಮುಖ ಛಿದ್ರವಾಗಿ ಕತ್ತು ಹಾಗೂ ಬಾಯಿಯ ಭಾಗ ಸುಟ್ಟು ಹೋದ ಹಿನ್ನೆಲೆ ಹಾಗೂ ತೀವ್ರ ರಕ್ತ ಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಹಸು ತಡ ರಾತ್ರಿ ೩ ಗಂಟೆ ಸುಮಾರಿಗೆ ಅಸುನೀಗಿದೆ.
ದನದ ಸಾವಿನಿಂದ ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿರುವ ಬಗ್ಗೆ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದರು. ಮೊದಲಿಗೆ ಈ ಬಗ್ಗೆ ಪ್ರಕರಣ ದಾಖಲಿಸಲು ನಿರಾಕರಿಸಿದ ಸ್ಥಳೀಯ ಪೊಲೀಸರು, ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣದಲ್ಲಿ ಪ್ರಾಣಿ ಹತ್ಯೆಗೆ ಯತ್ನಿಸಿದ ಬಗ್ಗೆ ಯಾವುದೇ ಕಾಯ್ದೆಯ ಪ್ರಕಾರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು,. ಐಪಿಸಿ ಸೆಕ್ಷನ್ 286 ಪ್ರಕಾರ ನಿರ್ಲಕ್ಷ್ಯ ಪ್ರಕರಣ ಮಾತ್ರ ದಾಖಲಿಸಿಕೊಂಡು ದೊಡ್ಡ ಪ್ರಕರಣವೊಂದನ್ನು ಕೈಚೆಲ್ಲಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.