ಕರಾವಳಿ

ಹಂತಕರಿಟ್ಟ ಸ್ಫೋಟಕಕ್ಕೆ ಮೇಯಲು ಹೋಗಿದ್ದ ಹಸು ಬಲಿ

Pinterest LinkedIn Tumblr

bantwala_hasu-bali

ಬಂಟ್ವಾಳ, ಅ.19 : ಕರೋಪಾಡಿ ಗ್ರಾಮದ ಚೆಲ್ಲಂಗಾರುವಿನ ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಹಂತಕರಿಟ್ಟ ಸ್ಫೋಟಕ ವಸ್ತುವೊಂದು ಸ್ಫೋಟಗೊಂಡು ಮೇಯಲು ಹೋಗಿದ್ದ ಊರ ಹಸುವಿನ ಮುಖ ಛಿದ್ರವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.

ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯ ಅವರಿಗೆ ಸೇರಿದ 4 ವರ್ಷದ ಹಸು ನಿತ್ಯ ಗುಡ್ಡಕ್ಕೆ ತೆರಳಿ ಹುಲ್ಲು ಮೇದು ಹೊಟ್ಟೆ ತುಂಬಿಸಿಕೊಂಡು ಮನೆಗೆ ಹಿಂತಿರುಗುತ್ತಿತ್ತು. ಸೋಮವಾರ ಬೆಳಗ್ಗೆ ಚೆಲ್ಲಂಗಾರು ಗುಡ್ಡಕ್ಕೆ ತೆರಳಿದ ದನ ಸಂಜೆಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ರಾಧಾಕೃಷ್ಣ ಹಾಗೂ ಅವರ ತಾಯಿ ಅಪ್ಪಿ ಮೈದಾನದ ಭಾಗಕ್ಕೆ ಹೋಗಿ ಹುಡುಕಾಡುವ ಸಂದರ್ಭ ಮರದ ಕೆಳಗೆ ಹಸು ಮುಖ ಛಿದ್ರವಾಗಿ ರಕ್ತ ಇಳಿಸುತ್ತಾ ನಿಂತುಕೊಂಡಿರುವುದು ಕಾಣಿಸಿದೆ.

bantwala_hasu-bali2

ತಕ್ಷಣ ಮನೆಯವರ ಸಹಾಯದೊಂದಿಗೆ ಗುಡ್ಡದಿಂದ ಮನೆಗೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡಲಾಯಿತಾದರೂ ಕತ್ತು ಹಾಗೂ ಬಾಯಿಯ ಭಾಗ ಸುಟ್ಟು ಸಿಡಿದು ಹೋದ ಹಿನ್ನೆಲೆ ಹಾಗೂ ತೀವ್ರ ರಕ್ತ ಸ್ರಾವದಿಂದ ಹಸು ನಿನ್ನೆ ತಡ ರಾತ್ರಿ 3 ಗಂಟೆ ಸುಮಾರಿಗೆ ಅಸುನೀಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಠಾಣೆಯ ಪೊಲೀಸ್ ಸಹಾಯಕ ಉಪನಿರೀಕ್ಷಕ ಆನಂದ ಪೂಜಾರಿ, ಸಿಬ್ಬಂದಿಗಳಾದ ರಾಮಚಂದ್ರ, ರಮೇಶ, ಜಯಕುಮಾರ್, ಪ್ರವೀಣ್ ರೈ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಅಡ್ಯನಡ್ಕ ಪಶು ವೈದ್ಯ ಪರಮೇಶ್ವರ ನಾಯ್ಕ ಅವರು ಶವ ಪರೀಕ್ಷೆ ನಡೆಸಿ, ಕೆಲವು ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ವಿಟ್ಲದ ಬಜರಂಗದಳದ ಮುಖಂಡ ಜಯಂತ ಸಿ.ಎಚ್., ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮತ್ತಿತರರು ಭೇಟಿ ನೀಡಿ ಮನೆಯವರಿಗೆ ದೈರ್ಯತುಂಬಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸೂಕ್ತ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ.

Comments are closed.