ಕರಾವಳಿ

ಕಟೀಲು ಅಸ್ರಣ್ಣರ ಮನೆ ದರೋಡೆ ಪ್ರಕರಣ : ಐವರು ಆರೋಪಿಗಳ ಸೆರೆ – 4,25,000 ರೂ.ನಗದು,ಸೊತ್ತು ವಶ

Pinterest LinkedIn Tumblr

kateel_robary-accused_1

ಮಂಗಳೂರು,ಅಕ್ಟೋಬರ್.17 : ಸಿಸಿಬಿ ಪೊಲೀಸರು ಹಾಗೂ ಬಜ್ಪೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇತ್ತೀಚಿಗೆ ಕಟೀಲು ದೇವಸ್ಥಾನದ ಮೊಕ್ತೇಸರ ವಾಸುದೇವ ಅಸ್ರಣ್ಣ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಿ, ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಸುನೀಲ್. ವೈ ನಾಯಕ್ ಅವರಿಗೆ ಆರೋಪಿಗಳ ಇರುವಿಕೆ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಕೂಡಲೇ ಅವರು ತಮ್ಮ ಸಿಬ್ಬಂದಿಗಳು ಹಾಗೂ ಬಜಪೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಮತ್ತು ಸಿಬ್ಬಂದಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಮಂಗಳೂರು ತಾಲೂಕಿನ ತೆಂಕ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆ ಬಸ್ ನಿಲ್ದಾಣದ ಬಳಿ K.A 19 ME 3310 ನಂಬರಿನ ಐ 20 ಕಾರಿನಲ್ಲಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

kateel_robary-accused_2

ಬಿಜೈ ಕಾಪಿಕಾಡ್ ಬಾರೆಬೈಲ್‌ನ ಸುದೀಂದ್ರ ಯಾನೆ ಸುಶೀಂದ್ರರಾವ್ (33), ಬಜಪೆ ಎಕ್ಕಾರಿನ ಚಿದಾನಂದ (33), ಬಜ್ಪೆ ಪೆರ್ಮುದೆಯಾ ಸೂರಜ್ ಕುಮಾರ್ (35),ಬಂಟ್ವಾಳದ ಸುರೇಶ್ ಕುಮಾರ್ ಎಂ (40), ಬಜ್ಪೆ ಎಕ್ಕಾರಿನ ಸದಾಶಿವ ಶೆಟ್ಟಿ (49) ಬಂಧಿತ ಆರೋಪಿಗಳು.

ಆರೋಪಿಗಳಿಂದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ 4,25,000/- ರೂಪಾಯಿ ನಗದು ಹಣ ಮತ್ತು 3 ಗ್ರಾಂ 900 ಮಿ ಗ್ರಾಂ ತೂಕದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಾವಚಿತ್ರ ಇರುವ ಪೆಂಡೆಂಟ್ ಒಂದು, ಆರೋಪಿಗಳು ಬಳಸಿದ ಐದು ಮೊಬೈಲ್ ಪೋನ್‍ಗಳು ಮತ್ತು ಕೃತ್ಯದ ಸಮಯದಲ್ಲಿ ಉಪಯೋಗಿಸಿದ K.A 19 ME 3310 ನಂಬ್ರದ ಐ 20 ಕಾರನ್ನು ಸ್ವಾದೀನ ಪಡಿಸಲಾಗಿದೆ ಎಂದು ಕಮಿಷನರ್ ವಿವರಿಸಿದರು.

kateel_robary-accused_3

ಕಳೆದ ಅ.4ರಂದು ಗಿಡಿಗೆರೆಯಲ್ಲಿನ ಅಸ್ರಣ್ಣರ ಮನೆಗೆ ಮಧ್ಯರಾತ್ರಿಯ ಸುಮಾರು ನುಗ್ಗಿದ್ದ ಎಂಟು ಮಂದಿ ದರೋಡೆಕೋರರ ತಂಡ ತಲವಾರು, ಬಂದೂಕು, ರಾಡ್ ತೋರಿಸಿ ಮನೆಮಂದಿಯನ್ನು ಬೆದರಿಸಿದ್ದಲ್ಲದೆ 82 ಪವನ್ ಚಿನ್ನಾಭರಣ, 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಘಟನಾಸ್ಥಳಕ್ಕೆ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಜ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ಮುಂದುವರಿದಿತ್ತು.

ಇದೀಗ ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮತ್ತು ಸೊತ್ತುಗಳ ಬಗ್ಗೆ ಶೋಧ ಕಾರ್ಯ ಮುಂದುವರಿಯುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್.ಶಾಂತರಾಜು ( ಕಾನೂನು ಸುವ್ಯವಸ್ಥೆ), ಡಾ. ಸಂಜೀವ್ ಪಾಟೀಲ್ (ಅಪರಾಧ ಮತ್ತು ಸಂಚಾರಿ) ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು

Comments are closed.