ಕರಾವಳಿ

ಉಡುಪಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭ

Pinterest LinkedIn Tumblr

ಉಡುಪಿ: ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಲು ಜಾತಿ ಎಂಬುದು ಮುಖ್ಯ ಅಲ್ಲ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶನಿವಾರ , ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್ ಉಡುಪಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗದಲ್ಲಿ ಆದಿ‌ಉಡುಪಿಯ ಅಂಬೇಡ್ಕರ್ ಸಭಾ ಭವನದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

udupi_valmiki_jayanthi-1 udupi_valmiki_jayanthi-2 udupi_valmiki_jayanthi-3 udupi_valmiki_jayanthi-4 udupi_valmiki_jayanthi-5 udupi_valmiki_jayanthi-6 udupi_valmiki_jayanthi-7 udupi_valmiki_jayanthi-8 udupi_valmiki_jayanthi-9 udupi_valmiki_jayanthi-10

ಜಾತಿ ವ್ಯವಸ್ಥೆಯಲ್ಲಿ ಕೆಳವರ್ಗದ ವ್ಯಾಧ ಸಮುದಾಯದಿಂದ ಬಂದ ವಾಲ್ಮೀಕಿ, ರಾಮಾಯಣದಂತಹ ಮಹಾನ್ ಕಾವ್ಯ ರಚನೆ ಮಾಡಿದರು, ಸಾಧನೆ ಎನ್ನುವುದು ಯಾವುದೇ ವರ್ಗಕ್ಕೆ ಸೀಮಿತವಾಗಿಲ್ಲ, ಸಾಧನೆಗಳು ಯಾವುದೇ ಜಾತಿಯ ವ್ಯಕ್ತಿಗಳಿಂದ ಬರಬಹುದು, ಸಾಧನೆಗಳಿಗೆ ಜಾತಿ ಮುಖ್ಯವಾಗುವುದಿಲ್ಲ , ವಾಲ್ಮೀಕಿಯವರ ಜೀವನ ಸಾಧನೆ , ಜಾತಿ ಪದ್ದತಿಯ ನಿವಾರಣೆಗೆ ಮಾದರಿಯಾಗಿದೆ ಎಂದು ಸಚಿವರು ಹೇಳಿದರು.
ಮಹರ್ಷಿ ಶ್ರೀ ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಕುರಿತು ಉಪನ್ಯಾಸ ನೀಡಿದ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ ಮಾತನಾಡಿ, ವಾಲ್ಮೀಕಿ ತನ್ನ ವೈಯಕ್ತಿಕ ಶ್ರಮದ ಮೂಲಕ ಅಸಾಮಾನ್ಯ ಸಾಧನೆ ಮಾಡಿದವರು, ತಳ ಸಮುದಾಯದಿಂದ ಬಂದ ಇವರು, ತಳಸಮುದಾಯದ ವ್ಯಕ್ತಿಗಳಲ್ಲಿನ ಅಂತ:ಕರಣದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿದವರು, ಯಾವುದೇ ವ್ಯಕ್ತಿಯ ಬದುಕನ್ನು ಜಾತಿ ನಿರ್ಧರಿಸಬಾರದು ಎಂದು ಹೇಳಿದರು.

ಬುದ್ಧಿಶಕ್ತಿ, ವಿವೇಕ, ಜ್ಞಾನ ಇವು ಯಾರೂ ಸ್ವತ್ತೂ ಅಲ್ಲ, ಪ್ರತಿಯೊಬ್ಬರ ಆಂತರ್ಯದಲ್ಲೂ ಅಸಾಮಾನ್ಯ ಶಕ್ತಿ ಇರುತ್ತದೆ,ಅಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಪರಿಸರ ನಿರ್ಮಾಣವಾಗಬೇಕು, ಕ್ರಿ.ಪೂ.ಸುಮಾರು 2 ಅಥವಾ 3 ನೇ ಶತಮಾನದಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಗ್ರಂಥವು ಕೇವಲ ಪೌರಾಣಿಕ ಕಥೆಗಳನ್ನು ಮಾತ್ರ ಒಳಗೊಳ್ಳದೇ ನೈತಿಕ ಮೌಲ್ಯಗಳನ್ನು ಸಾರುವ , ಸಾಮಾಜಿಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಗ್ರಂಥವಾಗಿದೆ , ಮಾನವತಾವಾದವನ್ನು ಇಡೀ ವಿಶ್ವವೇ ಒಪ್ಪಿಕೊಂಡಿರುವ ಈ ಸಮಯದಲ್ಲಿ ವಾಲ್ಮೀಕಿಯವರ ಜೀವನ, ವ್ಯಕ್ತಿತ್ವದ ಕುರಿತು ಅರಿಯುವುದು ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ವಾಲ್ಕೀಕಿಯವರು ತಮ್ಮ ವ್ಯಾಧನ ವೃತ್ತಿಯಿಂದ ಬದಲಾವಣೆ ಕಂಡುಕೊಂಡಿದ್ದರಿಂದ ಮಹಾನ್ ಗ್ರಂಥ ರಚನೆ ಮಾಡಿದರು, ಬದಲಾವಣೆ ಎನ್ನುವುದು ಪ್ರತಿಯೊಬ್ಬರರ ಜೀವನದಲ್ಲೂ ಅಗತ್ಯವಿದೆ, ವಾಲ್ಮೀಕಿಯವರ ಈ ಬದಲಾವಣೆಯ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ.ಪಂಗಡದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಸರಳ ವಿವಾಹವಾದ ದಂಪತಿಗಳಿಗೆ , ಮತ್ತಿತರಿಗೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ .ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಮಹೇಶ್ಚಂದ್ರ ಉಪಸ್ಥಿತರಿದ್ದರು.
ಐ.ಟಿ.ಡಿ.ಪಿ. ಇಲಾಖೆಯ ಯೋಜನಾ ಸಮನ್ವಯಾಧಿಕರಿ ಹರೀಶ್ ಎಲ್. ಗಾಂವ್ಕರ್ ಸ್ವಾಗತಿಸಿದರು. ಅಧೀಕ್ಷಕ ವಿಶ್ವನಾಥ್ ವಂದಿಸಿದರು. ದಯಾನಂದ್ ನಿರೂಪಿಸಿದರು.

Comments are closed.