ಕರಾವಳಿ

ಇರಾನ್‍ನಿಂದ ಮಂಗಳೂರಿಗೆ ಬಂದ 0.25 ಮಿಲಿಯ ಟನ್ ಕಚ್ಚಾ ತೈಲ :ದೇಶದ ಎರಡನೇ ಅತಿದೊಡ್ಡ ಭೂಗತ ತೈಲ ಸಂಗ್ರಹಣಾ ಕಾರ್ಯಕ್ಕೆ ಚಾಲನೆ

Pinterest LinkedIn Tumblr

mrpl_oil_factry_1

ಮಂಗಳೂರು, ಆಕ್ಟೋಬರ್,12: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್‌ನ) ಸಿಂಗಲ್ ಪಾಯಿಂಟ್ ಮೂರ್‌ನಲ್ಲಿ ತೈಲ ಸ್ವೀಕರಿಸುವ ಅಭೂತಪೂರ್ವ ಕಾರ್ಯಕ್ಕೆ ಬುಧವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಬಜ್ಪೆ ಸಮೀಪದ ಪೆರ್ಮುದೆಯಲ್ಲಿರುವ ಐಎಸ್ಪಿಆರ್‌ಎಲ್ (ಭಾರತೀಯ ವ್ಯೆಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರ)ನ ಭೂಗತ ತೈಲಾಗಾರಕ್ಕೆ ಇರಾನ್ನಿಂದ ಎನ್‌ಎಂಪಿಟಿ ಮೂಲಕ ನೌಕೆಯಲ್ಲಿ ತರಲಾದ ತೈಲವನ್ನು ಪ್ರಾಯೋಗಿಕ ಹಂತದಲ್ಲಿ ತುಂಬುವ ಈ ಪ್ರಕ್ರಿಯೆಗೆ ಸಂಸದ ನಳಿನ್ ಕುಮಾರ್, ಶಾಸಕ ಮೊಯ್ದಿನ್ ಬಾವ ಹಾಗೂ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.

mrpl_oil_factry_2 mrpl_oil_factry_3

ಈ ಮೂಲಕ ಪೆರ್ಮುದೆಯಲ್ಲಿ ಭೂಗತ ತೈಲಾಗಾರ ನಿರ್ಮಾಣವಾಗಿ ಒಂದೂವರೆ ವರ್ಷದ ಬಳಿಕ ಇದೀಗ ತೈಲಾಗಾರಕ್ಕೆ ಇರಾನ್ನಿಂದ ಆಮದು ಮಾಡಲಾದ 0.25 ಮಿಲಿಯ ಟನ್ ಕಚ್ಚಾ ತೈಲವನ್ನು ಪಂಪ್ ಮಾಡಲಾಯಿತು. ಇರಾನ್‍ನಿಂದ 0.25 ಮಿಲಿಯ ಟನ್ ಕಚ್ಚಾ ತೈಲ ತುಂಬಿದ (ಐಎಸ್‍ಪಿಆರ್‍ಎಲ್ – ಇಂಡಿಯನ್ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹ ಲಿಮಿಟೆಡ್) ಮೊದಲ ಹಡಗು ಮಂಗಳೂರು ಬಂದರಿಗೆ ಬಂದಿದ್ದು, ಕಚ್ಚಾ ತೈಲ ತುಂಬಿದ ಈ ಹಡಗಿನಿಂದ ಸಂಗ್ರಹಿಸಲಾಗಿದ್ದ ತೈಲವನ್ನು ಇಂದು ಬೆಳಿಗ್ಗೆ ತಣ್ಣೀರುಬಾವಿ ಸಮೀಪದ ಎಂಆರ್‌ಪಿಎಲ್‌ನ ಬೂಸ್ಟಾರ್ ಪಂಪ್ ಸ್ಟೇಷನ್‌ನಲ್ಲಿ ಪೂಜಾ ವಿಧಿವಿಧಾನಗಳ ಬಳಿಕ ಪಂಪ್ ಮಾಡಲಾಯಿತು.

ಐಎಸ್ಪಿಆರ್‌ಎಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನ್ ಪಿಳ್ಳೆ, ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಎಚ್.ಕುಮಾರ್, ನಿರ್ದೇಶಕ (ರಿಫೈನರಿ) ಎಂ. ವೆಂಕಟೇಶ್, ಕಾರ್ಪೊರೇಟ್ ಕಮ್ಯೂನಿಕೇಷನ್ನ ಡಿಜಿಎಂ ಪ್ರಶಾಂತ್ ಬಾಳಿಗ ಈ ಸಂದರ್ಭ ಉಪಸ್ಥಿತರಿದ್ದರು.

mrpl_oil_factry_4 mrpl_oil_factry_5

ದೇಶದ ಇಂಧನ ಸಾಮರ್ಥ್ಯವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶಾಖಪಟ್ಟಣ, ಮಂಗಳೂರು ಹಾಗೂ ಪಾದೂರಿನಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲದ ಸಂಗ್ರಹಾಗಾರ ನಿರ್ಮಾಣಕ್ಕೆ ನಿರ್ಧರಿಸಿತು. ಇದು ದೇಶದಲ್ಲಿ ಈಗಾಗಲೇ ಇರುವ ಕಚ್ಚಾ ತೈಲ ಹಾಗೂ ಪೆಟ್ರೋಲ್ ಸಂಗ್ರಹಗಳ ಹೆಚ್ಚುವರಿ ಘಟಕವಾಗಿದೆ. ಮಂಗಳೂರಿನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳೂರಿನ ಭೂಗತ ತೈಲಗಾರವನ್ನು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಉದ್ಘಾಟಿಸಿದರು.

ವಿಶಾಖಪಟ್ಟಣ, ಪಾದೂರು ಹಾಗೂ ಪೆರ್ಮುದೆ ಸೇರಿ ಒಟ್ಟು ಮೂರು ಭೂಗತ ತೈಲಾಗಾರಗಳನ್ನು ಭಾರತ ಹೊಂದಿದೆ. ವಿಶಾಖಪಟ್ಟಣದ 1.33 ಮಿಲಿಯ ಟನ್ ಸಾಮರ್ಥ್ಯದ ತೈಲಾಗಾರ ಈಗಾಗಲೇ ಆರಂಭಗೊಂಡಿದೆ. ಪಾದೂರಿನ ದೇಶದ ಅತೀ ದೊಡ್ಡ ಅಂದರೆ 2.5 ಮಿಲಿಯ ಟನ್ ತೈಲ ಸಂಗ್ರಹ ಸಾಮರ್ಥ್ಯದ ಭೂಗತ ತೈಲಾಗಾರದ ಕಾಮಗಾರಿ ಶೇ. 98ರಷ್ಟು ಪೂರ್ಣಗೊಂಡಿದೆ. ಪೆರ್ಮುದೆಯ 1.5 ಮಿಲಿಯ ಟನ್, ದೇಶದ ಎರಡನೆ ಅತೀ ದೊಡ್ಡ ತೈಲ ಸಂಗ್ರಹ ಸಾಮರ್ಥ್ಯದ ತೈಲಾಗಾರದ ಕಾಮಗಾರಿ ಶೇ. 99.85ರಷ್ಟು ಪೂರ್ಣಗೊಂಡಿದ್ದು, ಇದೀಗ ಪ್ರಾಯೋಗಿಕ ನೆಲೆಯಲ್ಲಿ ತೈಲ ಸಂಗ್ರಹದ ಕಾರ್ಯವನ್ನು ಇಲ್ಲಿ ಆರಂಭಿಸಲಾಗಿದೆ.

mrpl_oil_factry_6 mrpl_oil_factry_7

ಚಂದ್ರಹಾಸನಗರದಿಂದ ಪಾದೂರಿಗೆ ಪೈಪ್ಲೈನ್ ಅಳವಡಿಕೆ ಕಾರ್ಯ ಈಗಾಗಲೇ ಭಾಗಶ: ಮುಗಿದಿದ್ದು ಉಳಿದ ಕಾರ್ಯ ವೇಗ ಪಡೆದುಕೊಂಡಿದೆ. ಪಾದೂರು ಮತ್ತು ಚಂದ್ರಹಾಸನಗರದಲ್ಲಿ ಏಕಶಿಲೆ ದೊರೆತಿದ್ದು ಅದನ್ನು ಕೊರೆದು ಕಚ್ಛಾತೈಲವನ್ನು ಸಂಗ್ರಹಿಸಿಡುವ ಯೋಜನೆ ಇದಾಗಿದೆ.

mrpl_oil_factry_8 mrpl_oil_factry_9

ಪೆರ್ಮುದೆಯ 1.5 ಮಿಲಿಯ ಟನ್ ತೈಲ ಸಂಗ್ರಹ ಸಾಮರ್ಥ್ಯದ ತೈಲಾಗಾರಕ್ಕೆ ಇದೇ ವರ್ಷ ಇನ್ನೆರಡು ಹಡಗುಗಳು ಇರಾನಿನಿಂದ ತೈಲ ಹೊತ್ತು ತರಲಿವೆ.ಈ ವರ್ಷಾಂತ್ಯದೊಳಗೆ ತೈಲಾಗಾರ ಅರ್ಧದಷ್ಟು ತುಂಬುವ ನಿರೀಕ್ಷೆಯಿದೆ ಎಂದು ಐಎಸ್‍ಪಿಆರ್‍ಎಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕ ರಾಜನ್ ಪಿಳ್ಳೈ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Comments are closed.