ಕರಾವಳಿ

ರಾಮಚಂದ್ರಾಪುರ ಮಠ ಆಡಳಿತದಲ್ಲಿ ಹಸ್ತಕ್ಷೇಪ : ವಿಶ್ವ ಹಿಂದೂ ಪರಿಷತ್ ಖಂಡನೆ

Pinterest LinkedIn Tumblr

ಉಡುಪಿ: ಹೊಸನಗರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಕುರಿತು ರಾಜ್ಯ ಸರಕಾರ ತಳೆದಿರುವ ನಿಲುವು ಹಿಂದೂ ಸಮಾಜದಲ್ಲಿ ಆತಂಕವನ್ನು ಮೂಡಿಸಿದೆ ಎಂದು ಸರಕಾರದ ಮಠ ವಿರೋಧಿ ನೀತಿಯನ್ನು ವಿಶ್ವ ಹಿಂದೂ ಪರಿಷತ್‌ನ ಮಠ ಮಂದಿರ ವಿಭಾಗದ ಕರ್ನಾಟಕ ಪ್ರಾಂತ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಉಗ್ರವಾಗಿ ಖಂಡಿಸಿದ್ದಾರೆ.

1798017_1490442951223919_1289624148314127569_n

ಮಠ ಮಂದಿರಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾಗಿ ಸಮಾಜಕ್ಕೆ ಮಾರ್ಗದರ್ಶನ, ಪರಂಪರೆಯ ಉಳಿವು, ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿ ಶಾಂತಿ, ನೆಮ್ಮದಿಯ ಬದುಕಿಗೆ ಪ್ರೇರಕ ಶಕ್ತಿಯಾಗಿ ಕಾರ್ಯಾನಿರ್ವಹಿಸುತ್ತಿದೆ. ಸಂಪೂರ್ಣವಾಗಿ ಸಮಾಜದ ಆಸ್ತಿಯಾಗಿರುವ ಮಠ ಮಂದಿರಗಳ ಮೇಲೆ ಹಿಡಿತ ಸಾಧಿಸಿ ಆಡಳಿತ ನಡೆಸುವ ಸರಕಾರದ ಹುನ್ನಾರು ಖಂಡನಾರ್ಹವಾಗಿದೆ. ಇದೀಗ ರಾಜ್ಯ ಸರಕಾರ ಅವ್ಯವಹಾರದ ನೆಪದಲ್ಲಿ ಹೊಸನಗರದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿ ಮಠದ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ.

ಮಠದ ಶಿಷ್ಯರು, ಭಕ್ತರ ಗಮನಕ್ಕೆ ತಾರದೇ, ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳದೇ ಆರೋಪ ಸಾಬೀತಾಗದೇ ಏಕಾ‌ಏಕಿ ಆಡಳಿತದಲ್ಲಿ ಮೂಗು ತೂರಿಸುವ ಪ್ರಯತ್ನ ಸಾಧುವಲ್ಲ ಮತ್ತು ಸರಕಾರಕ್ಕೆ ಶೋಭೆ ತರುವಂತಹದ್ದಲ್ಲ. ಹಿಂದೂ ಸಮಾಜವನ್ನು ಕಡೆಗಣಿಸುವ ಪ್ರಯತ್ನ ಸರಕಾರದಿಂದ ಮೇಲಿಂದ ಮೇಲೆ ಆಗುತ್ತಿದ್ದು, ಇದು ಹೀಗೆ ಮುಂದುವರಿದಲ್ಲಿ ಉಗ್ರ ಪ್ರತಿಭಟನೆಯ ಮೂಲಕ ರಾಜ್ಯವ್ಯಾಪಿ ಹೋರಾಟವನ್ನು ನಡೆಸಬೇಕಾದೀತು.

ಆದುದರಿಂದ ಸರಕಾರ ಈ ಕೂಡಲೇ ಎಚ್ಚೆತ್ತು ಹೊಸನಗರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪ್ರಸ್ತಾವವನ್ನು ಹಿಂಪಡೆದು ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವನ್ನು ಕೈ ಬಿಡಬೇಕೆಂದು ಪ್ರೇಮಾನಂದ ಶೆಟ್ಟಿ ಕಟ್ಕೆರೆ ಆಗ್ರಹಿಸಿರುವ ಜೊತೆಗೆ ಶ್ರೀ ರಾಮಚಂದ್ರಾಪುರ ಮಠದ ಭಕ್ತರೊಂದಿಗೆ ವಿಶ್ವ ಹಿಂದೂ ಪರಿಷತ್ ಬೆನ್ನೆಲುಬಾಗಿ ನಿಂತು ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

Comments are closed.