ಕಲಾವಿದರಿಗೆ ಕೈಗೆಟುಕದ ಮಂಗಳೂರು ಪುರಭವನ :ದೇವದಾಸ್ ಕಾಪಿಕಾಡ್
__ಸತೀಶ್ ಕಾಪಿಕಾಡ್
ಮಂಗಳೂರು, ಅ.5: ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಬರ್ಸ’ ತುಳು ಚಲನಚಿತ್ರ ಅಕ್ಟೋಬರ್ 13ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಲಭ್ಯವಾಗಿದ್ದು, ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತುಳು ರಂಗಭೂಮಿಯ ತೆಲಿಕೆದ ಬೊಳ್ಳಿ, ಖ್ಯಾತ ಹಾಸ್ಯ ಕಲಾವಿದ, ಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಉರ್ವಾಸ್ಟೋರ್, ಬಜ್ಪೆ, ಪೆರ್ಮುದೆ, ಕಟೀಲು ಹಾಗೂ ಚಿತ್ರಾಪುರ ಮೊದಲಾದ ಸ್ಥಳಗಳಲ್ಲಿ ಒಟ್ಟು 36 ದಿನಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಎಲ್ಲರ ಮನೆಮತಾಗಿರುವ ಯಾಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಲವ್ ಸೆಂಟಿಮೆಂಟ್, ಫೈಟ್, ಕಾಮಿಡಿ ಎಲ್ಲವೂ ಇದೆ ಎಂದರು.
ಕ್ಷಮಾ ಶೆಟ್ಟಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷ್ಮಣ್ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಗೋಪಿನಾಥ್ ಭಟ್, ಚೇತನ್ ರೈ, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ತಿಮ್ಮಪ್ಪ ಕುಲಾಲ್, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ಸುರೇಶ್ ಕುಲಾಲ್ ಮೊದಲಾದವರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಈಗಾಗಲೇ ಯು ಟ್ಯೂಬ್ ಮೂಲಕ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.
ಚಿತ್ರದ ಹಾಡುಗಳಿಗೆ ಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ:
ಚಿತ್ರದ ಕಾರ್ಯಕಾರಿ ನಿರ್ಮಾಪಕ ಸಚಿನ್ ಎ.ಎಸ್. ಉಪ್ಪಿನಂಗಡಿ ಅವರು ಮಾತನಾಡಿ, ಸಿನೆಮಾಕ್ಕಾಗಿ ಬಹುಭಾಷಾ ಗಾಯಕ ಕಾರ್ತಿಕ್, ದೇವದಾಸ್ ಕಾಪಿಕಾಡ್, ರೂಪಾ ಮಹಾದೇವನ್ ಜತೆ ನಟ ಅರ್ಜುನ್ ಕಾಪಿಕಾಡ್ ಕೂಡಾ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಈ ಬಾರಿಯ ಮಂಗಳೂರು ದಸರಾ ಶೋಭಾಯಾತ್ರೆ ಸಂದರ್ಭ ಚಿತ್ರದ ಪ್ರಮೋವನ್ನು ಒಳಗೊಂಡ ಟ್ಯಾಬ್ಲೋ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಚಿತ್ರದ ಪ್ರಚಾರವನ್ನು ಅತ್ಯಂತ ವಿನೂತನವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಕಲಾವಿದರಿಗೆ ಕೈಗೆಟುಕದ ಮಂಗಳೂರು ಪುರಭವನ
ಇಂದಿನ ದಿನಗಳಲ್ಲಿ ತುಳು ನಾಟಕಗಳ ಸಂಖ್ಯೆ ಕ್ಷೀಣಿಸಲು ನವೀಕರಣಗೊಂಡ ಪುರಭವನದ ಬಾಡಿಯೇ ಕಾರಣ. ತುಳುನಾಡಿನಲ್ಲಿ ನಾಟಕ, ಯಕ್ಷಗಾನ ಸೇರಿದಂತೆ ಕಲಾವಿದರಿಗೆ ಅನ್ನದ ಬಟ್ಟಲಾಗಿದ್ದ, ಪ್ರೋತ್ಸಾಹದ ತಾಣವಾಗಿದ್ದ ಪುರಭವನ ಇಂದು ಕಲಾವಿದರ ಕೈಗೆಟಕದಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ನಗರದಲ್ಲಿ ಸೂಕ್ತ ರಂಗ ಮಂದಿರದ ಕೊರತೆಯಿಂದಾಗಿ ಕಲಾವಿದರ ಪಾಡನ್ನು ಕೇಳುವವರಿಲ್ಲದಂತಾಗಿದೆ ಎಂದು ದೇವದಾಸ್ ಕಾಪಿಕಾಡ್ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನಿರ್ಮಾಪಕರುಗಳಾದ ಮುಕೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ, ಶರ್ಮಿಳಾ ಡಿ. ಕಾಪಿಕಾಡ್ ಹಾಗೂ ನಾಯಕ ನಟ ಅರ್ಜುನ್ ಕಾಪಿಕಾಡ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.