ಕರಾವಳಿ

ಕಾರ್ಕಳ : ಲಾರಿ ಹಾಗೂ ನ್ಯಾನೋ ಕಾರು ಢಿಕ್ಕಿ : ತಾಯಿ ಮತ್ತು ಮಗ ಸ್ಥಳದಲ್ಲೇ ಮೃತ್ಯು.

Pinterest LinkedIn Tumblr

karkala_axident_2deth_1

ಕಾರ್ಕಳ, ಅ.5: ಲಾರಿ ಹಾಗೂ ನ್ಯಾನೋ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ ಮತ್ತು ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂದು ಸಂಜೆ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಜೋಡುಕಟ್ಟೆ ನಿವಾಸಿ ಗ್ಲೊರಿಯಾ ಓಯಿಲ್ ಮಿಲ್ನ ಮಾಲಕ ವಾಲ್ಟರ್ ಡಿಸೋಜ ಅವರ ಪತ್ನಿ ಶಾಲೆಟ್ ಡಿಸೋಜ (45) ಹಾಗೂ ಅವರ ಪುತ್ರ ವಿನ್ಸನ್ ಡಿಸೋಜ (21) ಎಂದು ಗುರುತಿಸಲಾಗಿದೆ.

ಭತ್ತದ ಕಟಾವು ಯಂತ್ರವನ್ನು ಹೇರಿಕೊಂಡು ಕಾರ್ಕಳದಿಂದ ಪಡುಬಿದ್ರೆ ಮಾರ್ಗವಾಗಿ ಮಂಗಳೂರಿನತ್ತ ತೆರಳುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಬೆಳ್ಮಣ್ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ನ್ಯಾನೋ ಕಾರಿಗೆ ನಿಟ್ಟೆಯ ಲೆಮಿಲಾ ಕ್ರಾಸ್ ಸಮೀಪ ತಿರುವಿನಲ್ಲಿ ಢಿಕ್ಕಿ ಹೊಡೆದಿದೆ.

karkala_axident_2deth_2

ಇವರು ಕಳೆದ ನಾಲ್ಕು ತಿಂಗಳ ಹಿಂದೆ ಖರೀದಿಸಿದ ನ್ಯಾನೋ ಕಾರನ್ನು ಮಂಗಳೂರಿನ ಶೋರೂಂನಲ್ಲಿ ಸರ್ವೀಸ್ ಮಡಲು ಇಟ್ಟಿದ್ದು, ಸರ್ವೀಸ್ ಮುಗಿಸಿ ಕಾರ್ಕಳಕ್ಕೆ ಹಿಂದಿರುಗುತ್ತಿದ್ದರು. ಈ ಸಂದರ್ಭ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು ಮೃತದೇಹಗಳು ಕಾರಿನ ಒಳಗೆ ಸಿಲುಕಿ ಮುದ್ದೆಯಾಗಿದ್ದವು. ಜೆಸಿಬಿ ಮೂಲಕ ಕಾರನ್ನು ಒಡೆದು ತೆಗೆದು ಮೃತದೇಹಗಳನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆಯಲಾಯಿತು. ಘಟನೆಯಿಂದಾಗಿ ಕಾರ್ಕಳ – ಪಡುಬಿದ್ರೆ ಚತುಷ್ಪಥ ರಸ್ತೆಯಲ್ಲಿ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.

karkala_axident_2deth_3karkala_axident_2deth_6a

 karkala_axident_2deth_10 karkala_axident_2deth_4 karkala_axident_2deth_5

ಮೃತ ವಿನ್ಸನ್ ಡಿಸೋಜ ಇತ್ತೀಚೆಗಷ್ಟೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಗುಜರಾತಿನ ಕ್ಯಾಪ್ಟನ್ ಟ್ರ್ಯಾಕ್ಟರ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದು ಕಳೆದ ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ವಸತಿ ಸೌಲಭ್ಯ ಸರಿಯಿಲ್ಲದ ಕಾರಣ ಉದ್ಯೋಗ ತ್ಯಜಿಸಿ ಊರಿಗೆ ಮರಳಿದ್ದರು ಎಂದು ತಿಳಿದುಬಂದಿದೆ.

ಈ ರಸ್ತೆ ಚತುಷ್ಪಥವಾದಂದಿನಿಂದ ಹಲವು ಅಪಘಾತಗಳು ನಡೆದಿದ್ದು ಈ ತನಕ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಚತುಷ್ಪಥಗೊಂಡಿದ್ದರೂ ಈ ರಸ್ತೆಯಲ್ಲಿ ವಿಭಜಕ ಅಳವಡಿಸದೇ ಇರುವುದು ಜೊತೆಗೆ ತಿರುವು ಮುರುವು ರಸ್ತೆಯನ್ನು ನೇರಗೊಳಿಸದೆ ಚತುಷ್ಪಥವಾಗಿ ರಚಿಸಿರುವ ಪರಿಣಾಮ ವಿಪರೀತ ಅಪಘಾತಗಳು ನಡೆಯುತ್ತಲೇ ಇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತ ಪ್ರಕರಣ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.