ಮಂಗಳೂರು: ಬಂಟ್ವಾಳ ತಾಲೂಕಿನ ಸಜೀಪ ಸಮೀಪದ ಕೊಳಕೆ ಎಂಬಲ್ಲಿ ಬಾಲಕನೋರ್ವ ಮೈಮೇಲೆ ಬಿದ್ದ ಹೆಬ್ಟಾವಿನೊಂದಿಗೆ ಸೆಣಸಿ ಜೀವವುಳಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಈ ರೀತಿ ಹೆಬ್ಟಾವಿನ ಜತೆ ಕಾದಾಡಿ ಜೀವವುಳಿಸಿಕೊಂಡ ಸಾಹಸಿ ಬಾಲಕನನ್ನು ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ, ಕೊಳಕೆ ಕೂಡೂರು ನಿವಾಸಿ ಸುರೇಶ್ ಎಂಬವರ ಪುತ್ರ ವೈಶಾಖ್ (11 ವರ್ಷ) ಎನ್ನಲಾಗಿದೆ.
ವೈಶಾಖ್ ಎಂದಿನಂತೆ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ, ಸಮೀಪದಲ್ಲೇ ಇರುವ ತನ್ನ ಅಜ್ಜನ ಮನೆಗೆ ತೆರಳಿದ್ದ. ಸಾಗುವ ಹಾದಿ ಪೊದೆಗಳಿಂದ ಆವೃತವಾಗಿದೆ. ಸಂಜೆ 6 ಗಂಟೆಯ ವೇಳೆಗೆ ಮನೆಗೆ ಹಿಂತಿರುಗಿ ಬರುತ್ತಿದ್ದಾಗ ಪೊದೆಗಳೆಡೆಯಿಂದ ಹೆಬ್ಟಾವು ಒಮ್ಮೆಲೇ ಆತನ ಮೈಮೇಲೆ ಹಾರಿ ಸುತ್ತಿಕೊಳ್ಳಲಾರಂಭಿಸಿದ.
ನೆಲಕ್ಕುರುಳಿದ ಬಾಲಕ ಘಟನೆಯಿಂದ ವಿಚಲಿತನಾಗದೆ ಸಮಯಪ್ರಜ್ಞೆ ಮೆರೆದು ಹಾವಿನ ಜತೆ ಸೆಣಸಾಡಲು ತೊಡಗಿದ. ಹೆಬ್ಟಾವು ಆತನ ಕೈ, ಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸಿದೆ. ಅಷ್ಟರಲ್ಲಿ ಆತನಿಗೆ ಪಕ್ಕದಲ್ಲಿ ಕಲ್ಲೊಂದು ಗೋಚರಿಸಿದ್ದು ಅದನ್ನೇ ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿದ್ದಾನೆ. ಇದರಿಂದ ಹಾವಿನ ಮುಖಕ್ಕೆ ತೀವ್ರ ಗಾಯವಾಗಿದ್ದು ಕಣ್ಣು ಸಂಪೂರ್ಣ ಜಖಂಗೊಂಡಿತು. ಬಾಲಕನ ಕಲ್ಲಿನ ಏಟಿನಿಂದ ಗಾಯಗೊಂಡ ಹೆಬ್ಟಾವು ಆತನನ್ನು ಬಿಟ್ಟು ಅಲ್ಲಿಂದ ತೆರಳಿದೆ.
ಸೆಣಸಾಟದ ವೇಳೆ ಹಾವು ಬಾಲಕನ ಕೈ, ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಕಚ್ಚಿದ್ದು, ಇದರಿಂದ ಆತನಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಮನೆಯವರು ಆತನನ್ನು ಕೂಡಲೇ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಂದ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದು ಅದರಂತೆ ಅಲ್ಲಿಗೆ ಕರೆದುಕೊಂಡು ಹೋದಾಗ ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಬಾಲಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು , ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.