ಕರಾವಳಿ

ಲಕ್ಷಾಂತರ ಮತ್ಸ್ಯ ಪ್ರಿಯರ ನಿದ್ದೆಗೆಡಿಸಿದ ಈ ವಿಷಕಾರಿ ಮೀನು ಯಾವೂದು… ಇದರಲ್ಲಿ ವಿಷ ಸೇರಿದ್ದಾದರೂ ಹೇಗೆ..?

Pinterest LinkedIn Tumblr

chemberi_fish_poison

ಮಂಗಳೂರು, ಅ.5: ದ.ಕ. ಜಿಲ್ಲೆಯ ಉಳ್ಳಾಲ, ಹರೇಕಳ, ಬಂಟ್ವಾಳ ತಾಲ್ಲೂಕಿನ ಕೆಲವಡೆ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೀನಿನ ತಲೆ ತಿಂದು ಹಲವರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಶಯ ನಿವಾರಣೆಯಾಗುವವರೆಗೆ ಮೀನಿನ ತಲೆಯ ಮಾಂಸ ತಿನ್ನದಿರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

ಸಂಸ್ಕರಣ ಘಟಕದಲ್ಲಿ ಮೀನು ಸಂಸ್ಕರಿಸಿದ ನಂತರ ಉಳಿಯುವ ಮೀನಿನ ಯಾವುದೇ ತ್ಯಾಜ್ಯಗಳನ್ನು ಸಾರ್ವಜನಿಕರಿಗೆ ಅಥವಾ ಸಂಚಾರ ಮೀನು ಮಾರಾಟಗಾರರಿಗೆ, ಅಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಅಥವಾ ಕ್ಯಾಂಟೀನ್ ಇತ್ಯಾದಿಗಳಿಗೆ ನೀಡದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳ ಬೇಕು ಎಂದು ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯ :

ಉಳ್ಳಾಲದಲ್ಲಿ ಒಂದೇ ಮಾಲೀಕನಿಗೆ ಸೇರಿದ ಎರಡು ಕಾರ್ಖಾನೆಗಳಿಗೆ ಈ ಮೀನು ರಫ್ತಾಗುತ್ತದೆ. ಅಲ್ಲಿಂದ ಕಾರ್ಮಿಕರೇ ಅದರ ತಲೆ ಭಾಗಗಳನ್ನು ಮನೆಗೆ ತರುತ್ತಾರೆ. ಕೆಲವರು ಕ್ಯಾಂಟೀನುಗಳಿಗೆ ಕಡಿಮೆ ಬೆಲೆಗೆ ಮಾರುತ್ತಾರೆ ಎನ್ನಲಾಗಿದೆ. ಇವುಗಳನ್ನು ತಿಂದ ಸುತ್ತಮುತ್ತಲಿನ ಪ್ರದೇಶದ ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ.

ಇದೀಗ ಜಿಲ್ಲಾಡಳಿತ ಮೀನಿನ ಮಾದರಿಯನ್ನು ಆಹಾರ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಸಂಶೋಧನೆಗೆ ಕಳುಹಿಸಿದೆ. ಸಂಸ್ಕರಣೆ ಮಾಡುವ ಮೀನುಗಳು ಕೆಡದಂತೆ ಇವುಗಳಿಗೆ ಹೆಚ್ಚಿನ ರಾಸಾಯನಿಕಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.

ಮೀನು ರಫ್ತು ಮಾಡುವ ಸಂದರ್ಭ ಎಲ್ಲ ರೀತಿಯ ರಸಾಯನ ಬಳಸುವಂತಿಲ್ಲ. ಕಳೆದ ವರ್ಷವೂ ಮೀನು ಸೇವಿಸಿ ಅಸ್ವಸ್ಥರಾದ ಪ್ರಸಂಗ ನಡೆದಿತ್ತು. ಈ ವರ್ಷ ಗಂಭೀರವಾಗಿದ್ದು, ಇದರ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕು. ಜೊತೆಗೆ ಜನರಿಗೂ ಈ ಬಗ್ಗೆ ಜಾಗೃತಿ ಅಗತ್ಯವಿದೆ. ರಸಾಯನದಿಂದ ಆಗಿದೆಯೇ ಅಥವಾ ನೀರಿನಲ್ಲೇ ಸಮಸ್ಯೆ ಬಂದಿದೆಯೇ ಎನ್ನುವುದನ್ನು ತಿಳಯಲು ಮೀನು ಹಿಡಿಯಲ್ಪಟ್ಟ ಪ್ರದೇಶದ ನೀರು ಮತ್ತು ಮೀನನ್ನು ಪರೀಕ್ಷೆಗೊಳಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವ ಖಾದರ್ ಸೂಚನೆ :

ಜಿಲ್ಲೆಯ ಕೆಲವಡೆ ಮೀನಿನ ತಲೆ ತಿಂದು ಹಲವರು ಅಸ್ವಸ್ಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಆಹಾರ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ. ಇಂತಹ ಪ್ರಕರಣಗಳು ಯಾಕೆ ಆಗಿವೆ? ಇದಕ್ಕೆ ಕಾರಣ ಹಾಗೂ ಯಾರ ನಿಲ೯ಕ್ಷ್ಯಗಳಿವೆ ಎಂಬುದರ ಬಗ್ಗೆ ವಿಚಾರಣೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗರೂಕತೆ ವಹಿಸಬೇಕಿದೆ ಎಂದವರು ಸೂಚನೆ ನೀಡಿದ್ದಾರೆ.

ಈ ಎಲ್ಲಾ ಅಂಶಗಳ ಬಗ್ಗೆ ಮೀನುಗಾರಿಕಾ ಇಲಾಖೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಸಭೆಯನ್ನು ಕೂಡಲೇ ಕರೆಯುವಂತೆ ಸಚಿವರು ತಾಕೀತು ಮಾಡಿದ್ದಾರೆ. ಜನಸಾಮಾನ್ಯರು ಈ ಘಟನೆಯ ಬಗ್ಗೆ ಸಂಶಯ ನಿವಾರಣೆಯಾಗುವವರೆಗೆ ಮೀನು ತಲೆ ತಿನ್ನುವುದನ್ನು ಮುಂದೂಡಬೇಕು.

ಕಳೆದ 3-4ದಿನಗಳಲ್ಲಿ ಸುಮಾರು 150 ಕ್ಕೂ ಅಧಿಕ ಮಂದಿ ಮೀನು ತಲೆ ತಿಂದು ಅಸ್ವಸ್ಥ ರಾಗಿದ್ದು, ಇವರಲ್ಲಿ ಬಹುತೇಕರು ಗುಣ ಮುಖರಾಗಿದ್ದಾರೆ. 9ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಇವರ ಚಿಕಿತ್ಸೆಯ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಖಾದರ್ ಅವರು ತಿಳಿಸಿದ್ದಾರೆ

ಲಕ್ಷಾಂತರ ಮಂದಿಯ ನಿದ್ದೆಗೆಡಿಸಿದ ಮೀನು : ಚೆಂಬೇರಿ 

ಮೀನಿನ ತಲೆ ಭಾಗ ತಿಂದು ನೂರಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಮೂಲಕ ಕಳೆದ ಮೂರು ದಿನಗಳಿಂದ ಮೀನು ಪ್ರಿಯರ ನಿದ್ದೆಗೆಡಿಸಿದ ಅ ಮೀನಾದರೂ ಯಾವೂದು..

ಈ ನಿಗೂಡ ರಹಸ್ಯವನ್ನು ಪತ್ತೆಹಚ್ಚಲಾಗಿದ್ದು, ಇದೀಗ ಈ ಸಮಸ್ಯೆಗೆ ಕಾರಣವಾದ ಚೆಂಬೇರಿ ಮೀನುಗಳ ದೇಹಗಳಲ್ಲಿ ಅಷ್ಟೊಂದು ವಿಷ ಸೇರಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಚೆಂಬೇರಿ, ಏರಿ, ಕ್ಯಾವೇಜ್ ಎಂದು ಪ್ರಾದೇಶಿಕವಾಗಿ ಕರೆಯುವ ಈ ಮೀನಿಗೆ ಇಂಗ್ಲಿಷ್‍ನಲ್ಲಿ ರೆಡ್ ಸ್ನ್ಯಾಪರ್ ಅನ್ನುತ್ತಾರೆ. ಇವುಗಳಲ್ಲಿ ರೇನ್‍ಬೊ ಸ್ನ್ಯಾಪರ್ ಎಂಬ ಇನ್ನೊಂದು ಪ್ರಬೇಧವೂ ಇದೆ. ಕೆಂಪು ಕಣ್ಣು, ಬಿಳಿ ಬಣ್ಣಗಳಲ್ಲಿ ಕಂಗೊಳಿಸುವ ಮೀನುಗಳು ಸಮುದ್ರ, ನದಿ, ತೊರೆ, ಕಲ್ಲು ಬಂಡೆಗಳ ಸಂದುಗಳಲ್ಲಿರುವ ಈ ಮೀನುಗಳಿಗೆ ಸಣ್ಣ ಗಾತ್ರದ ಮೀನುಗಳೇ ಆಹಾರ.

ಅದರೆ, ಕೆಲವೊಮ್ಮೆ ಹವಾಗುಣ ವೈಫಲ್ಯದಿಂದಾಗಿಯೋ, ಅಥವಾ ಅವುಗಳ ಆಹಾರ ಪದ್ಧತಿಯೇ ಇವುಗಳಿಗೆ ಮಾರಕವಾಗುತ್ತದೆ. ಕೆಲ ಮೀನುಗಳು ಸಸ್ಯಜೀವಿಗಳೂ ಆಗಿರುತ್ತವೆ. ಸಸ್ಯಗಳಲ್ಲಿರುವ ಸೂಕ್ಷ್ಮ ಜೀವಿಯೊಂದು ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಮೀನುಗಳ ದೇಹವನ್ನು ಸೇರಿದಲ್ಲಿ ಮೀನುಗಳು ವಿಷಪೂರಿತವಾಗುತ್ತವೆ. ಅಂತಹ ಮೀನುಗಳನ್ನು ಚೆಂಬೇರಿ ಸೇವಿಸಿದರೆ ಅವುಗಳ ದೇಹವೂ ವಿಷಯುಕ್ತವಾಗುತ್ತವೆ.

ಮಂಗಳೂರು, ಮಲ್ಪೆ, ಮಂಜೇಶ್ವರ, ತಮಿಳುನಾಡಿನಲ್ಲಿ ಹೆಚ್ಚಾಗಿ ದೊರೆಯುವ ಚೆಂಬೇರಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಹಾಗಾಗಿ ರಫ್ತು ಮಾಡುವ ಕೆಂಪೆನಿಗಳು ಇವುಗಳನ್ನು ಹೆಚ್ಚು ಬೆಲೆಗೆ ಬೇಕಾದರೂ ಕೊಳ್ಳುತ್ತವೆ.

ಜೊತೆಗೆ ಜನಸಾಮಾನ್ಯರಿಗೆ ಈ ಮೀನು ತಿನ್ನಲು ಸಿಗುವುದಿಲ್ಲ. ರಫ್ತು ಮಾಡುವ ಸಂದರ್ಭದಲ್ಲಿ ಇವುಗಳ ತಲೆ ಭಾಗ, ಕರುಳು ಮುಂತಾದುವುಗಳನ್ನು ಬೇರ್ಪಡಿಸಿ, ಉಳಿದವುಗಳನ್ನು ಕೆಡದಂತೆ ಹವಾನಿಯಂತ್ರಣದಲ್ಲಿಟ್ಟು ಪ್ಯಾಕ್ ಮಾಡಿ ಕಳುಹಿಸುತ್ತಾರೆ.

Comments are closed.