
ಕಲಬುರ್ಗಿ: ಬಸ್ ನಲ್ಲಿಯೇ ಕಂಡಕ್ಟರ್ ಒಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕಲಬುರ್ಗಿಯ ಚಿಂಚೊಳ್ಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಈರಣ್ಣ ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಬಸ್ ನಲ್ಲಿ ಈರಣ್ಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಈರಣ್ಣ ಅವರು ಮೂಲತಃ ಹುಮ್ನಾಬಾದ್ ನ ಮೀನಕೇರಾದವರಾಗಿದ್ದು, ಬೀದರ್ ನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.
ನಿನ್ನೆಯಷ್ಟೇ ಕಲಬುರ್ಗಿ ಚಿಂಚೊಳ್ಳಿಯಲ್ಲಿ ಬಸ್ ನಿಲ್ಲಿಸಿದ್ದ ಸಂಚಾರಿ ನಿರೀಕ್ಷಕರು, ಬಸ್ ನ್ನು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಬಸ್ ನಲ್ಲಿ ನಾಲ್ವರು ಪ್ರಯಾಣಿಕರಿದ್ದರು. ಈ ವೇಳೆ ಇಬ್ಬರ ಬಳಿ ಟಿಕೆಟ್ ಇದ್ದು, ಮತ್ತಿಬ್ಬರ ಬಳಿ ಟಿಕೆಟ್ ಇರಲಿಲ್ಲ. ಹೀಗಾಗಿ ಸಂಚಾರಿ ನಿರೀಕ್ಷಕರು ಕಂಡಕ್ಟರ್ ಗೆ ಅಮಾನತು ಮಾಡಿ ದಂಡ ವಿಧಿಸಿದ್ದರು.
ಈ ಹಿನ್ನೆಲೆಯಲ್ಲಿ ಮನನೊಂದು ಕಂಡಕ್ಟರ್ ಈರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.