ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿಯನ್ನು ಗೂಂಡಾ ಯಾಕ್ಟ್‌ನಲ್ಲಿ ಬಳ್ಳಾರಿ ಜೈಲಿಗಟ್ಟಿದ ಪೊಲೀಸರು
ಮಂಗಳೂರು, ಅ. 4: ಮಂಗಳೂರು ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಸಹಿತ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿಯೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿ, ಆರೋಪಿಯಿಂದ ಆರೋಪಿಯಿಂದ 94.216 ಕೆ.ಜಿ. ಗಾಂಜಾ ಮತ್ತು 60ರಿಂದ 70 ಗ್ರಾಂನಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಟಿ.ಪಿ.ಅಬ್ದುಲ್ ರಹೀಂ ಯಾನೆ ಗೂಡ್ಸ್ ರಹೀಂ ಯಾನೆ ಕಂಡಿ ರಹೀಂ ಬಂಧಿತ ಆರೋಪಿ.
ಈ ಬಗ್ಗೆ ಮಂಗಳೂರಿನ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಅವರು, ಈತ ಕಳೆದ ಐದು ವರ್ಷಗಳಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಗ್ದ ನಾಗರಿಕರಿಗೆ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಸಹಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ. ಆರೋಪಿ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಈ ಪೈಕಿ ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಮೂರು ಪ್ರಕರಣಗಳು ತನಿಖಾ ಹಂತದಲ್ಲಿದೆ. ಜಾಮೀನು ಪಡೆದಿದ್ದೂ ಈತ ಯಾವುದೇ ಕಾನೂನು ಕ್ರಮಕ್ಕೆ ಹೆದರದೆ ತನ್ನ ಸಮಾಜ ಘಾತುಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡಿದ್ದಾನೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಈತನ ಅಪರಾಧ ಕೃತ್ಯಗಳಿಗೆ ಸಂಬಂಧ ಪಟ್ಟಂತೆ 1985ನೇ ಯಾಕ್ಟ್ ಪ್ರಕಾರ (The Karnataka Prevention of Dangerous Activities of Bootleggers, Drug-offenders, Gamblers, Goondas, Immoral Traffic Offenders and Slum grabbers Ordinance, 1985) ಗೂಂಡಾ ಕಾನೂನು ಕಾಯ್ದೆ ದಾಖಲಿಸಿ ಬಳ್ಳಾರಿ ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವವರಲ್ಲಿ ಈತನಲ್ಲದೆ, ಇನ್ನೂ ಕೆಲವರು ಇದ್ದು, ಅವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸುಧಾರಿಸಿಕೊಳ್ಳದಿದ್ದರೆ ಅವರನ್ನೂ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು.
ಡಿಸಿಪಿಗಳಾದ ಕೆ.ಎಂ.ಶಾಂತರಾಜು ( ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಡಾ.ಸಂಜೀವ ಎಂ.ಪಾಟಿಲ್ ( ಅಪರಾಧ) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.