*ಯೋಗೀಶ್ ಕುಂಭಾಸಿ
ಕುಂದಾಪುರ: ದನಗಳನ್ನು ಮೇಯಿಸಲು ಬಿಟ್ಟು ಪುನಃ ಕರೆತರಲು ಹೋಗುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ವ್ಯಕ್ತಿಯೋರ್ವ ಕೊಚ್ಚಿಹೋದ ಘಟನೆ ನಡೆದಿದ್ದು ಆತನ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ನಾಡು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಳ್ನಾಡು ನಿವಾಸಿಯಾಗಿರುವ ಕಿಶೋರ ಶೆಟ್ಟಿ(45) ಎನ್ನುವವರೇ ನೀರಿನಲ್ಲಿ ಕೊಚ್ಚಿ ಹೋದ ದುರ್ದೈವಿ.

ಕಳೆದ 20 ವರ್ಷಗಳಿಂದ ಹಳ್ನಾಡುವಿನಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನೆಲೆಸಿರುವ ಕಿಶೋರ ಶೆಟ್ಟಿ ಅವರು ಹೈನುಗಾರಿಕೆ ಹಾಗೂ ಕೃಷಿಯನ್ನು ಅವಲಂಭಿತರಾಗಿದ್ದು ಈ ಪರಿಸರದಲ್ಲಿ ಸ್ನೇಹಮಯವಾದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯಾಗಿದ್ದರು. ನಿತ್ಯದಂತೆ ಬೆಳಿಗ್ಗೆ ಹಸುಗಳನ್ನು ಹೊಳೆಯಾಚೆಯ ಹುಲ್ಲುಗಾವಲು ಪ್ರದೇಶಕ್ಕೆ ಮೇಯಲು ಬಿಟ್ಟು ಬಂದಿದ್ದ ಅವರು ಮಧ್ಯಾಹ್ನದ ಬಳಿಕ ಹಸುಗಳನ್ನು ಪುನಃ ಕರೆತರಲು ಹೋಗುವಾಗ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಆಸುಪಾಸಿನಲ್ಲಿದ್ದ ಸ್ಥಳೀಯರಾದ ಬೋಳು ಶೆಟ್ಟಿ ಅವರು ಕೊಚ್ಚಿಹೋಗುತ್ತಿದ್ದ ಕಿಶೋರ್ ಅವರನ್ನು ಬಚಾವ್ ಮಾಡಲು ಯತ್ನಿಸಿದರಾದರೂ ನೀರಿನ ಸೆಳೆತ ಜಾಸ್ಥಿಯಿದ್ದ ಕಾರಣ ಅದು ಸಾಧ್ಯವಾಗಿಲ್ಲ. ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಿಶೋರ್ ಅವರು ಕೊಚ್ಚಿ ಹೋಗುವ ಸಂದರ್ಭ ಅವರ ಮನೆ ನಾಯಿಯೂ ಅವರ ಜೊತೆಗೆ ಕೊಚ್ಚಿಹೋಗಿತ್ತು ಎನ್ನಲಾಗಿದೆ.
ಘಟನೆ ಬಳಿಕ ಕೂಡಲೇ ಸ್ಥಳಿಯರು ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಆಗಮಿಸಿದ ಅವರು ಕಾರ್ಯೋನ್ಮುಖರಾಗಿದ್ದರು. ಎರಡು ದೋಣಿಗಳು, ಖಾರ್ವಿಕೇರಿಯ ನುರಿತ ಮುಳುಗು ತಜ್ಞರು ಹಾಗೂ ಕಂಡ್ಲೂರು ಹಾಗೂ ಹಳ್ನಾಡು ಭಾಗದ ಅಪ್ತಾಝ್ ಮನ್ನಾ, ನಿಸಾರ್ ಮಝಾರ್, ರಿಜ್ವಾನ್ ಮೊದಲಾದ ಈಜು ಪಟುಗಳ ಸಮೇತ ಮಧ್ಯಾಹ್ನದಿಂದ ಸತತ ೫ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಕತ್ತಲೆಯಾದ್ದರಿಂದ ಶೋಧ ಕಾರ್ಯವನ್ನು ಮಂಗಳವಾರ ಬೆಳಿಗ್ಗೆ ಮಾಡಲಾಗುತ್ತದೆ ಎಂದು ಸಂಬಂದಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಪರಿಸರದಲ್ಲಿ ಸಕ್ರೀಯರಾಗಿದ್ದ ಕಿಶೋರ ಶೆಟ್ಟಿ ಅವರು ಮಹಾಗಣಪತಿ ಭಜನಾ ಮಂಡಳಿ ಸದಸ್ಯರಾಗಿದ್ದು ಇಂದು ನವರಾತ್ರಿ ಪೂಜೆಯ ಭಜನಾ ಕಾರ್ಯಕ್ರಮಕ್ಕೆ ಸೌಕೂರು ದೇವಸ್ಥಾನಕ್ಕೆ ತೆರಳು ಅಣಿಯಾಗಿದ್ದರು. ಹಲವಾರು ಸಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡ ಅವರು ಕಾವ್ರಾಡಿ ಹಾಲು ಉತ್ಪಾಧಕರ ಸಂಘದ ನಿರ್ದೇಶಕರೂ ಆಗಿದ್ದರು.
ಘಟನಾ ಸ್ಥಳಕ್ಕೆ ಕಂಡ್ಲೂರು ಠಾಣೆ ಎಸ್.ಐ. ಗಜೇಂದ್ರ, ತಾಲೂಕು ಪಂಚಾಯತ್ ಸದಸ್ಯೆ ಅಂಬಿಕಾ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್ ಶೆಟ್ಟಿ, ಕಾವ್ರಾಡಿ ಗ್ರಾಮಪಂಚಾಯತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಸದಸ್ಯರಾದ ಕಾಳಿಂಗ ಶೆಟ್ಟಿ, ನಾಗು ಮೊಗವೀರ, ವಿಜಯ ಪುತ್ರನ್, ಅಂಪಾರು ಗ್ರಾ.ಪಂ ಅಧ್ಯಕ್ಷ ಕಿರಣ್ ಶೆಟ್ಟಿ ಭೇಟಿ ನೀಡಿದ್ದರು.
Comments are closed.