ಕರಾವಳಿ

ನಾಲ್ಕು ಸರಗಳ್ಳರ ಬಂಧನ : ಕಳ್ಳರಿಂದ ಎರಡು ಬೈಕ್, ಸಹಿತ 2ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Pinterest LinkedIn Tumblr

buntwl_chain_snacher

ಬಂಟ್ವಾಳ, ಅ.2: ಬಂಟ್ವಾಳ ವೃತ್ತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಎರಡು ಬೈಕ್, 2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೋರಸೆ ತಿಳಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿನ್ನೆ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ದೈಯುಂಬು ಎಂಬಲ್ಲಿನ ಬಲ್ಲೂರು ಗುಡ್ಡೆ ನಿವಾಸಿ ಬಶೀರ್ ಎಂಬವರ ಪುತ್ರ ನುಮಾನ್(20), ಕಣ್ಣೂರು ಬೀಡು ನಿವಾಸಿ ಅಬ್ದುಲ್ ಕರೀಂ ಎಂಬವರ ಪುತ್ರ ಶಭಾಝ್(19), ಕಣ್ಣೂರು ಕುಂಡಾಲ ನಿವಾಸಿ ಬದ್ರುದ್ದೀನ್ ಎಂಬವರ ಪುತ್ರ ಶಭಾಝ್(20), ಪುದು ಗ್ರಾಮದ ಕುಂಪನಮಜಲು ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರ ತೌಸೀಫ್(23) ಎಂಬವರನ್ನು ಬಂಧಿಸಲಾಗಿದೆ ಎಂದರು.

ಆರೋಪಿಗಳು ಒಂದು ವರ್ಷದಿಂದ ಬಂಟ್ವಾಳ ವೃತ್ತ ವ್ಯಾಪ್ತಿಯ ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಪರಾರಿಯಾಗುತ್ತಿದ್ದರು. ಒಂದು ವರ್ಷದ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಅಡ್ಯಾರ್ ಪದವು ಮತ್ತು ಕಣ್ಣೂರು ಚೆಕ್ ಪೋಸ್ಟ್ ಬಳಿಯಿಂದ ಪಲ್ಸರ್ ಬೈಕ್‌ಗಳನ್ನು ಕಳ್ಳತನ ನಡೆಸಿದ್ದ ಆರೋಪಿಗಳು ಆ ಬೈಕ್‌ನಲ್ಲಿ ಸರ ಎಗರಿಸುವ ಕೃತ್ಯ ನಡೆಸುತ್ತಿದ್ದರು ಎಂದು ತಿಳಿಸಿದ ಅವರು, ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬೆಂಜನಪದವಿನಲ್ಲಿ ವಾಹನಗಳನ್ನು ತಪಾಸನೆ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ನುಮಾನ್ ಮತ್ತು ತೌಸೀಫ್‌ನನ್ನು ಬಂಧಿಸಲಾಗಿದೆ. ಅವರು ನೀಡಿದ ಸುಳಿವಿನಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇನ್ನಿಬ್ಬರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಆರೋಪಿಗಳ ಪೈಕಿ ನುಮಾನ್ ವಿರುದ್ಧ ಜಿಲ್ಲೆಯಾದ್ಯಂತ ವಿವಿಧ ಠಾಣೆಯಲ್ಲಿ ೭ ಸುಳಿಗೆ, ಕನ್ನ, ಕಳವು ಪ್ರಕರಣಗಳು ದಾಖಲಾಗಿದ್ದು ಆ ಪೈಕಿ ಕೆಲವು ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನವಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾನೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಎರಡು ಬೈಕ್‌ಗಳು, ಒಂದು ಚೂರಿ ಹಾಗೂ ಮಹಿಳೆಯರ ಕುತ್ತಿಗೆಯಿಂದ ಎರಗಿಸಿರುವ ನಾಲ್ಕು ಚಿನ್ನದ ಸರಗಳನ್ನು ವಶಪಡಿಕೊಳ್ಳಲಾಗಿದೆ. ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡದೆ ಮನೆಯಲ್ಲೇ ಇಟ್ಟಿದ್ದರು ಎಂದು ಅವರು ತಿಳಿಸಿದರು.

ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮಾರ್ಗದರ್ಶನದಂತೆ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯರ ನೇತೃತ್ವದಲ್ಲಿ ಗ್ರಾಮಾಂತರ ಎಸ್ಸೈ ರಕ್ಷಿತ್ ಎ.ಕೆ., ಸಿಬ್ಬಂದಿಯಾದ ಜನಾರ್ದನ, ಜಗದೀಶ, ಜಯಕುಮಾರ್, ನಝೀರ್, ಸುರೇಶ್, ಪ್ರಶಾಂತ್, ಸುನಿತಾ, ಬಂಟ್ವಾಳ ವೃತ್ತ ನಿರೀಕ್ಷಕರ ತಂಡದ ಗಿರೀಶ್, ನರೇಶ್ ಹಾಗೂ ಚಾಲಕರಾದ ವಿಜಯೇಶ್ವರ ಹಾಗೂ ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಮತ್ತು ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಸ್ಪಿ ಭೂಷಣ್ ಜಿ. ಬೋರಸೆ ತಿಳಿಸಿದರು.

Comments are closed.