ಕರಾವಳಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ : ಮಂಗಳೂರು ದಸರಾಕ್ಕೆ ಈ ಬಾರಿ ‘ಅಕ್ರೆಲಿಕ್'( ದೀಪ) ವರ್ಣಾಲಂಕಾರ ಸೊಬಗು..

Pinterest LinkedIn Tumblr

kudroli_dasara_lighting_1

ಮಂಗಳೂರು : ಮಂಗಳೂರು ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾಕ್ಕೆ ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್'( ದೀಪ) ವರ್ಣಾಲಂಕಾರ ಮಾಡುವ ಮೂಲಕ ಹೊಸ ಮೆರುಗು ನೀಡಲಾಗಿದೆ. ಇದು ಈ ಬಾರಿಯ ವಿಶೇಷತೆಯಾಗಿದೆ.

ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ಕಲ್ಯಾಣ ಮಂಟಪವೂ ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ಶೈಲಿಯ ಆಕರ್ಷಕ ಹೊಸ ವಿನ್ಯಾಸದಲ್ಲಿ ಅಲಂಕಾರಗೊಂಡಿದೆ.

ಮಂಗಳೂರು ದಸರಾದ ದರ್ಬಾರ್ ಮಂಟಪದಲ್ಲಿನ ಶಾರದಾ ಮಾತೆ ಪ್ರತಿಷ್ಠಾಪಿಸಲ್ಪಡುವ ವೇದಿಕೆಯು ಸಂಪೂರ್ಣ ಅಕ್ರೆಲಿಕ್ ವರ್ಣಾಂಲಕಾರದ ಜತೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಆಕರ್ಷಣೆಯೊಂದಿಗೆ ವೀಕ್ಷಕರಿಗೆ ಮಂಗಳೂರು ದಸರಾದ ಹೊಸ ಅನುಭವವನ್ನು ನೀಡಲಿದೆ. ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪವನ್ನು ವಿಶೇಷ ಅಲಂಕಾರಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ.

kudroli_dasara_lighting_2

ಅರಮನೆ ದರ್ಬಾರನ್ನು ಹೋಲುವ ರೀತಿಯಲ್ಲಿ ಪ್ರತಿ ವರ್ಷ ಹೊಸ ಹೊಸ ವಿನ್ಯಾಸಗಳೊಂದಿಗೆ ಮಂಟಪವನ್ನು ಅಲಂಕಾರಗೊಳಿಸಲಾಗುತ್ತಿದೆ. ಕಳೆದ ವರ್ಷ ಗೋಲ ಗುಮ್ಮಟ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ದರ್ಬಾರ್ ಮಂಟಪವು ಈ ಬಾರಿ, ‘ಅಕ್ರೆಲಿಕ್'( ದೀಪ) ವರ್ಣಾಲಂಕಾರ ಮೂಲಕ ವಿಭಿನ್ನ ವೈಭವದಲ್ಲಿ ರೂಪುಗೊಂಡಿದೆ.

ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ.

ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಂಗಳೂರು ದಸರಾದ ಅಂಗವಾಗಿ ಈಗಾಗಲೇ ನಗರದ ರಸ್ತೆ ಹಾಗೂ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳು ಬೆಳಗಿ ಮಂಗಳೂರು ನಗರವೇ ಝಗಮಿಸಲಾರಂಭಿಸಿದೆ. ಇದೇ ವೇಳೆ ಕುದ್ರೋಳಿ ಕ್ಷೇತ್ರವೂ ಸುಣ್ಣ ಬಣ್ಣಗಳೊಂದಿಗೆ ಹೊಸ ಮೆರುಗನ್ನು ಪಡೆದಿದೆ.

kudroli_dasara_lighting_3

‘ಪ್ರತಿ ವರ್ಷ ಮಂಗಳೂರು ದಸರಾಕ್ಕೆ ದೇಶ ವಿದೇಶಗಳಿಂದಲೂ ಸೇರಿದಂತೆ ಲಕ್ಷಾಂತರ ಮಂದಿ ಸಾಕ್ಷಿಯಾಗುತ್ತಿದ್ದಾರೆ. ಪ್ರತಿ ವರ್ಷ ಕ್ಷೇತ್ರದ ಆಡಳಿತ ಮಂಡಳಿಯ ಸಲಹೆಯಂತೆ ಮಂಟಪವನ್ನು ಹೊಸ ಹೊಸ ವಿನ್ಯಾಸಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಮಂಗಳೂರು ದಸರಾವನ್ನು ಮತ್ತಷ್ಟು ಆಕರ್ಷಕವಾಗಿಸಲು ಪ್ರಯತ್ನಿಸಲಾಗುತ್ತಿದೆ.

ನವರಾತ್ರಿಯ ಮೊದಲ ದಿನ ಅಕ್ಟೋಬರ್ 1ರಂದು ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.

ಬಳಿಕ ಪ್ರತಿ ದಿನ ಬಣ್ಣದ ಆಕರ್ಷಕ ಸೀರೆಯೊಂದಿಗೆ ಶಾರದಾ ಮಾತೆಗೆ ಅಲಂಕಾರಗಳನ್ನು ನಡೆಸಲಾಗುತ್ತದೆ. ಕೊನೆಯ ದಿನ ವಿಶೇಷ ಕಚ್ಚೆ ಸೀರೆಯ ವಿಶೇಷ ಅಲಂಕಾರದ ಜತೆಗೆ ಶಾರದಾ ಮಾತೆಗೆ ಕಸ್ತೂರಿ ಮಲ್ಲಿಗೆ ಜಲ್ಲಿ (ಮಲ್ಲಿಗೆಯ ಕೇಶಾಲಂಕಾರ) ಹಾಕಲಾಗುತ್ತದೆ.

ಈ ಅಲಂಕಾರಕ್ಕಾಗಿ ಸುಮಾರು 90 ಅಟ್ಟಿ ಕಸ್ತೂರಿ ಮಲ್ಲಿಗೆ (ಒಂದು ಅಟ್ಟಿಯಲ್ಲಿ ನಾಲ್ಕು ಚೆಂಡು)ಯನ್ನು ಬಳಸಲಾಗುತ್ತದೆ. ಜತೆಗೆ ಗುಲಾಬಿ ಎಸಳುಗಳ ಮೂಲಕ ವಿಶೇಷ ಜಲ್ಲಿಯನ್ನು ಹಾಕಲಾಗುವ ಬಗ್ಗೆ ಮಾಹಿತಿ ಲಭಿಸಿದೆ.

Kudroli_Dhwara_Inau_20 Kudroli_Dhwara_Inau_21 Kudroli_Dhwara_Inau_19 Kudroli_Dhwara_Inau_15 Kudroli_Dhwara_Inau_13

Kudroli_dasara_Lighting_3 Kudroli_dasara_Lighting_5 Kudroli_dasara_light_4 Kudroli_dasara_light_1

 

ಅಂತೂ, ಈ ಬಾರಿ ಹೊಸ ವಿನ್ಯಾಸ, ಹೊಸ ಮೆರುಗಿನಿಂದ ಮಂಗಳೂರು ದಸರಾದಂಗವಾಗಿ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗೋಕರ್ಣನಾಥ ಕ್ಷೇತ್ರ ಸರ್ವಾಲಂಕಾರಗೊಂಡಿದೆ.

Comments are closed.