ಕರಾವಳಿ

ಚಾಲಕನ ನಿಯ್ರಂತಣ ತಪ್ಪಿ ಕಮರಿಗಿಳಿದ ಬಸ್ ಪಲ್ಟಿ: 16 ಮಂದಿಗೆ ಗಂಭೀರ ಗಾಯ

Pinterest LinkedIn Tumblr

bus_palti_injured_1

ಮಂಗಳೂರು, ಸೆ.28: ಮುಂಬೈಯಿಂದ ಮಂಗಳೂರಿಗೆ ಮರಳುತ್ತಿದ್ದ ವಿಆರ್‌ಎಲ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಇಂದು ನಸುಕಿನ ಜಾವ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಪಲ್ಟಿಯಾದ ಘಟನೆ ಹೊನ್ನಾವರ ತಾಲೂಕಿನ ಮಂಕಿ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಒಟ್ಟು 16ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ನಸುಕಿನ 3 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಬಸ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದೆ. ಮಂಕಿ ಸಮೀಪ ಬಸ್ ಬರುವಷ್ಟರಲ್ಲಿ ರಸ್ತೆ ಪಕ್ಕದ ಆಳವಾದ ಕಮರಿಗೆ ಬಸ್ ಇಳಿಯಿತು ಎಂದು ಬಸ್ ಪ್ರಯಾಣಿಕರು ತಿಳಿಸಿದ್ದಾರೆ. ಬಸ್ಸಿನ ಕಿಟಕಿ ಬದಿ ಕುಳಿತಿದ್ದ ನಾಲ್ವರು ಅಡಿಯಲ್ಲಿ ಸಿಕ್ಕಿಬಿದ್ದು ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಸಹಪ್ರಯಾಣಿಕರು ಹೊರಕ್ಕೆ ತೆಗೆದು ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಕತ್ತಲೆ ಇದ್ದಿದ್ದರಿಂದ ಗಾಯಗೊಂಡಿದ್ದ ಸಹಪ್ರಯಾಣಿಕರೇ ರಸ್ತೆಗೆ ಓಡಿಬಂದು ಖಾಸಗಿ ವಾಹನಗಳನ್ನು ತಡೆದು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮ ವಹಿಸಿದರು.

ಬಳಿಕ ಹೊನ್ನಾವರ, ಮಂಕಿ ಠಾಣೆಯ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ತಾಂತ್ರಿಕ ದೋಷದಿಂದ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಬಸ್ಸಿನಲ್ಲಿ ಒಟ್ಟು ೩೦ ಮಂದಿಯಿದ್ದು, ಘಟನೆಯ ವೇಳೆ ಎಲ್ಲರೂ ನಿದ್ರೆಗೆ ಜಾರಿದ್ದರು. ಗಾಯಗೊಂಡವರಲ್ಲಿ ಏಳು ಮಂದಿ ಮಹಿಳೆಯರೂ ಸೇರಿದ್ದಾರೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗಾಯಾಳುಗಳ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Comments are closed.