ಕರಾವಳಿ

ಮಂಗಳೂರು ಜೈಲಿಗೆ ಮಧ್ಯರಾತ್ರಿ ದಿಢೀರ್ ದಾಳಿ : ಅಪಾರ ಪ್ರಮಾಣದ ಮೊಬೈಲ್,ಗಾಂಜಾ,ಅಯುಧ ವಶ

Pinterest LinkedIn Tumblr

Jail_Police_raid_4

ಮಂಗಳೂರು, ಸೆ.5 : ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ಧಿಯಲ್ಲಿರುವ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಇಂದು ಮುಂಜಾನೆ ಪೊಲೀಸರು ದಿಢೀರ್ ದಾಳಿ ನಡೆಸಿ ಕೈದಿಗಳ ಬಳಿಯಿಂದ ಅಪಾರ ಪ್ರಮಾಣದ ಮೊಬೈಲ್, ಗಾಂಜಾ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರ ನಿರ್ದೇಶನದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಸೋಮವಾರ ಬೆಳ್ಳಂಬೆಳಗ್ಗೆ ೨ ಗಂಟೆಯ ಸಮಯ ಮಂಗಳೂರಿನ ಸಬ್ ಜೈಲಿಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಕೈದಿಗಳು ಬಳಸುತ್ತಿದ್ದ ಸುಮಾರು 29 ಮೊಬೈಲ್, 12 ಸಿಮ್ ಕಾರ್ಡ್,ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ಪ್ಯಾಕೆಟ್ , ಒಂದು ಚೂರಿ, ಲೋಹದ ಅಯುಧ ಹಾಗೂ ಕಬ್ಬಿಣದ ಸಲಾಕೆ ಪತ್ತೆಯಾಗಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಜೈಲಿನ ಇತಿಹಾಸದಲ್ಲೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಮೊಬೈಲ್ ಪತ್ತೆಯಾಗಿದ್ದು, ಜೈಲಿನಲ್ಲಿ ಬಿಗಿ ಬಂದೋ ಬಸ್ತ್ ಇದ್ದರೂ ಇಷ್ಟು ಪ್ರಮಾಣದ ಮೊಬೈಲ್ ಹಾಗೂ ಗಾಂಜಾ ಜೈನೊಳಗೆ ಬಂದ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.

ಶನಿವಾರ ಇಬ್ಬರು ವಿಚಾರಣಾಧೀನ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿತ್ತು. ವಿಚಾರಣಾಧೀನ ಕೈದಿ ಸರ್ಪ ರಾಜ್ ಎಂಬಾತ ತನ್ನ ತಂಡದೊಂದಿಗೆ ಸೇರಿ ಇನ್ನೋರ್ವ ವಿಚಾರಣಾಧೀನ ಕೈದಿ ನೌಶದ್ ಬೆಂಗ್ರೆ ಎಂಬಾತನ ಮೇಲೆ ಹರಿತವಾದ ಮಾರಣಾಂತಿಕ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಪದೇ ಪದೆ ಜೈಲಿನಲ್ಲಿ ಈ ರೀತಿ ಕೈದಿಗಳ ಮಧ್ಯೆ ಮಾರಾಮಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಡಿಸಿಪಿಗಳಾದ ಶಾಂತಾರಾಜು, ಸಂಜೀವ ಪಾಟೀಲ್, ಎಸಿಪಿಗಳಾದ ಉದಯ ನಾಯಕ್ ತಿಲಕ್ಚಂದ್ರ, ಬರ್ಕೆ ಇನ್ಸ್‌ಪೆಕ್ಟರ್ ರಾಜೇಶ್, ಕದ್ರಿ ಇನ್ಸ್‌ಪೆಕ್ಟರ್ ಮಾರುತಿ ನಾಯಕ್, ಬಂದರ್ ಇನ್ಸ್‌ಪೆಕ್ಟರ್ ಶಾಂತಾರಾಮ್, ಉರ್ವಾ ಇನ್ಸ್‌ಪೆಕ್ಟರ್ ರವೀಶ್ ಮೊದಲಾದವರು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಜೊತೆಗೆ ಇತರ ಪೊಲೀಸ್ ಸಿಬ್ಬಂದಿಗಳು ಹಾಗೂ ಕೆ.ಎಸ್.ಆರ್.ಪಿ ತಂಡ ಕೂಡ ಕಾರ್ಯಾಚರಣೆಗೆ ಸಾತ್ ನೀಡಿದ್ದರು.

Comments are closed.