ಕರಾವಳಿ

ಮಾಂಡ್ ಸೊಭಾಣ್ ಸಂಸ್ಥೆಯಿಂದ ಬ್ರಾಹ್ಮಣರು ಮತ್ತು ಕ್ರೈಸ್ತ ಸಮುದಾಯಗಳ ನಡುವೆ ಘರ್ಷಣೆಗೆ ಪ್ರಚೋದನೆ : ಆರೋಪ

Pinterest LinkedIn Tumblr

Konkani_Manavi_Mond

ಮಂಗಳೂರು: ಮಂಗಳೂರು ಮೂಲದ ಮಾಂಡ್ ಸೊಭಾಣ್ ಸಂಸ್ಥೆ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರೈಸ್ತ ಸಮುದಾಯಗಳ ನಡುವೆ ಘರ್ಷಣೆಗೆ ಪ್ರಚೋದನೆ ನೀಡುತ್ತಿದೆ ಎಂದು ಎಂದು ಆರೋಪಿಸಿ ಸಮಾನ ಮನಸ್ಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟ ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆ ದ. ಕ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರದ ಅನುದಾನ ಪಡೆಯುತ್ತಿರುವ ಮಂಗಳೂರು ಮೂಲದ ಮಾಂಡ್ ಸೊಭಾಣ್ ಕಳೆದ ಎರಡು ವರ್ಷಗಳಿಂದ ಕೊಂಕಣಿಯ ಖ್ಯಾತನಾಮ ಸಾಹಿತಿಗಳು ಮತ್ತು ಕಲಾವಿದರ ತೇಜೋವಧೆ, ನಿಂದನೆ, ಅವಹೇಳನದಲ್ಲಿ ನಿರತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರೈಸ್ತ ಸಮುದಾಯಗಳ ನಡುವೆ ಘರ್ಷಣೆಗೆ ಪ್ರಚೋದನೆ ನೀಡುತ್ತಿದೆ. ಮಾತ್ರವಲ್ಲ ಕೊಂಕಣಿ ಭಾಷೆಯನ್ನು ಬರೆಯಲು ಬಳಸುವ ಲಿಪಿಯನ್ನು ಮುಂದಿಟ್ಟುಕೊಂಡು ಗೋವಾ ಮತ್ತು ಕರ್ನಾಟಕ ರಾಜ್ಯದ ಕೊಂಕಣಿ ಭಾಷಿಕರ ನಡುವೆ ವೈಷಮ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ. ಮಾಂಡ್ ಸೊಭಾಣ್ ಸಂಘಟನೆಗೆ ನೀಡಿದ ಅನುದಾನವನ್ನು ತಡೆಹಿಡಿದು, ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಿ, ಶಿಸ್ತುಕ್ರಮ ಕೈಗೊಳ್ಳಬೇಕೆಂದು ಪತ್ರ ಮೂಲಕ ಒತ್ತಾಯಿಸಲಾಗಿದೆ.

ಪತ್ರದ ಪ್ರತಿಗಳನ್ನು ಗೋವಾ ರಾಜ್ಯದ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹಾಗೂ ಮಾನವ ಸಂಪನ್ಮೂಲ ಇಲಾಖೆಗೂ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.


ಮನವಿಯಲ್ಲಿ ಏನಿದೆ..

ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆ
Konkani Writers and Artistes Association
ಸಂಪರ್ಕ ವಿಳಾಸ : ರೊನಾಲ್ಡ್ ಸಿಕ್ವೇರಾ, ಬಾಳಹಿಲ್ಸ್, ಬಾಳಾ ಪೊಸ್ಟ್ , ಮಂಗಳೂರು – ೫೭೫ ೦೩೦.
ಇ ಮೇಲ್ ವಿಳಾಸ : konkaniwriters@gmail.com
ದೂರವಾಣಿ ಸಂಪರ್ಕ : 9448485377 ( ಅಧ್ಯಕ್ಷರು) 9880810329 ( ಕಾರ್ಯದರ್ಶಿ) ಕಛೇರಿ : 0824 : 4280629

ಪತ್ರಿಕಾ ಪ್ರಕಟಣೆ

ಸರಕಾರದ ಅನುದಾನ ಪಡೆದು ಮಾಂಡ್ ಸೊಭಾಣ್‌ನಿಂದ ಸಾಹಿತಿಗಳ ನಿಂದನೆ, ಕೋಮುಘರ್ಷಣೆಗೆ ಪ್ರಚೋದನೆ
– ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರಿಂದ ಮುಖ್ಯಮಂತ್ರಿಗೆ ಪತ್ರ

ಸರಕಾರದ ಅನುದಾನವನ್ನು ಪಡೆದು ಮಂಗಳೂರು ಮೂಲದ ಮಾಂಡ್ ಸೊಭಾಣ್ ಎಂಬ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಕೊಂಕಣಿಯ ಖ್ಯಾತನಾಮ ಸಾಹಿತಿಗಳು ಮತ್ತು ಕಲಾವಿದರ ತೇಜೋವಧೆ, ನಿಂದನೆ, ಅವಹೇಳನೆಯಲ್ಲಿ ನಿರತವಾಗಿದೆ. ಈ ಸಂಘಟನೆಯ ಗುರಿಕಾರ ಎರಿಕ್ ಒಝಾರಿಯೊ ಈ ಕೃತ್ಯಕ್ಕೆ ಕೆಲವು ಪೀತ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದಾರೆ.

ಕರ್ನಾಟಕದ ಹೆಮ್ಮೆಯ ಪುತ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮಂಗಳೂರು ಮೂಲದ ಮೇರುಕವಿ ಶ್ರೀ ಮೆಲ್ವಿನ್ ರೊಡ್ರಿಗಸ್ ಅವರನ್ನು “ಸೊಂಟಕ್ಕೆ ಎಲುಬಿಲ್ಲದವರು, ಸೊಂಟದ ಕೆಳಗಿನ ಅಗತ್ಯ ಅಂಗ ಇಲ್ಲದವರು” ಎಂದು ಅಸಂವಿಧಾನಿಕ ಭಾಷೆಯಲ್ಲಿ ಎರಿಕ್ ಒಝಾರಿಯೊ ನಿಂದಿಸಿದ್ದಾರೆ. ಮಾತ್ರವಲ್ಲ ಇವರಿಗೆಲ್ಲ ಗೌಡ ಸಾರಸ್ವತ ಬ್ರಾಹ್ಮಣರು (ಕೊಂಕಣೆ) ಅಪ್ಪಂದಿರು, ಇವರು ಅವರ ಎಂಜಲಿಗೆ ಕಾಯುವ ಕೊರಗರು (ಹರಿಜನರು) ಎಂದು ಅಸಂವಿಧಾನಿಕ / ಜಾತಿನಿಂದನಾ ಪದಗಳನ್ನು ಬಳಸಿ ಅವಮಾನಿಸಿದ್ದಾರೆ.

ಬೈಲಾದಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಯಾವುದೇ ಜಾತಿ ಮತ ಬೇಧವಿಲ್ಲದೇ, ಕರ್ನಾಟಕ, ಗೋವಾ, ದಿಯೂ, ದಮನ್ ರಾಜ್ಯಗಳ ಗಡಿಯಿಲ್ಲದೆ ಕೊಂಕಣಿ ಭಾಷಿಕರ ಏಕತೆ ಮತ್ತು ಸಮಗ್ರತೆಗಾಗಿ ದುಡಿಯುತ್ತೇವೆಂದು ನಮೂದಿಸಿ ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿರುವ ಮಾಂಡ್ ಸೊಭಾಣ್ ಸಂಸ್ಥೆ, ಇಂದು ಸರಕಾರದ ಅನುದಾನ ಪಡೆದು, ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರೈಸ್ತ ಸಮುದಾಯಗಳ ನಡುವೆ ಘರ್ಷಣೆಗೆ ಪ್ರಚೋದನೆ ನೀಡುತ್ತಿದೆ. ಮಾತ್ರವಲ್ಲ ಕೊಂಕಣಿ ಭಾಷೆಯನ್ನು ಬರೆಯಲು ಬಳಸುವ ಲಿಪಿಯನ್ನು ಮುಂದಿಟ್ಟುಕೊಂಡು ಗೋವಾ ಮತ್ತು ಕರ್ನಾಟಕ ರಾಜ್ಯದ ಕೊಂಕಣಿಭಾಷಿಕರ ನಡುವೆ ವೈಷಮ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ. ಇದೇ ಕಾರಣಕ್ಕಾಗಿ ಈ ಸಂಘಟನೆ ಶಕ್ತಿನಗರದ ಕಲಾಂಗಣ್ ವಠಾರವನ್ನು ಕೇಂದ್ರವಾಗಿಟ್ಟುಕೊಂಡು, ಹಲವಾರು ಲೆಟರ್ ಹೆಡ್ ಸಂಘಟನೆಗಳನ್ನು ಹುಟ್ಟುಹಾಕಿದೆ. ಶ್ರೀ ಎರಿಕ್ ಒಝಾರಿಯೊ ಈ ಎಲ್ಲಾ ಸಂಘಟನೆಗಳ ಗುರಿಕಾರ / ಪ್ರಮುಖ ಸೂತ್ರದಾರರಾಗಿದ್ದಾರೆ. ಈ ಸಂಘಟನೆಗಳ ಮೂಲಕ ಪತ್ರಿಕಾ ಗೋಷ್ಠಿಗಳನ್ನು ಕರೆಯುವುದು, ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಬೆದರಿಸುವುದು , ಜೊತೆಗೆ, ಪೀತ ಪತ್ರಿಕೆ ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಖ್ಯಾತನಾಮರ ತೇಜೋವಧೆ ಮಾಡುವುದರ ಮೂಲಕ ಕೊಂಕಣಿಭಾಷಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಠಿಸಿದ್ದಾರೆ.

ಜಾತಿನಿಂದನೆ, ಖ್ಯಾತನಾಮ ಸಾಹಿತಿಗಳ ಅವಹೇಳನ, ಚಾರಿತ್ರ್ಯಹರಣ, ಜಾತಿ ಮತ್ತು ರಾಜ್ಯದ ಆದಾರದಲ್ಲಿ ಕೊಂಕಣಿ ಭಾಷಿಕರಲ್ಲಿ ಘರ್ಷಣೆಗೆ ಪ್ರಚೋದನೆ ಇವೇ ಮುಂತಾದ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಮಾಂಡ್ ಸೊಭಾಣ್ ಸಂಸ್ಥೆಗೆ ಸರಕಾರ ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ ಎರಡೂವರೆ ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆ ಮಾಡಿರುವುದು ತೀರಾ ವಿಷಾದನೀಯ. ಸಮಾಜವಿರೋದಿ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಗೆ ಅನುದಾನ ನೀಡುವ ಮೂಲಕ ಪರೋಕ್ಷವಾಗಿ ಸರಕಾರವೇ ಸಮಾಜವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆಯೊ ? ಎಂಬ ಆತಂಕಕಾರಿ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡಲಾರಂಬಿಸಿದೆ.

ಆದುದರಿಂದ ಈ ಕೂಡಲೇ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಂಡ್ ಸೊಭಾಣ್ ಸಂಘಟನೆಗೆ ನೀಡಿದ ಅನುದಾನವನ್ನು ತಡೆಹಿಡಿದು, ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಿ, ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಆತ್ಮ ಗೌರವ ಮತ್ತು ಯೋಗಕ್ಷೇಮಕ್ಕಾಗಿ ದುಡಿಯುತ್ತಿರುವ ಸಮಾನ ಮನಸ್ಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟ ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆ ರಾಜ್ಯದ ಮುಖ್ಯಮಂತ್ರಿಯವರನ್ನು ಪತ್ರ ಬರೆದು ಒತ್ತಾಯಿಸಿದೆ. ಸಂಘಟನೆಯ ಪದಾಧಿಕಾರಿಗಳಾದ ರೊನಾಲ್ಡ್ ಸಿಕ್ವೇರಾ, ಫ್ಲೋರಿನ್ ರೋಚ್, ರೋಶನ್ ಮಾಡ್ತಾ ಹಾಗೂ ಸದಸ್ಯ ಹೆನ್ರಿ ಮೆಂಡೋನ್ಸಾ ಸೂಕ್ತ ಪುರಾವೆಗಳೊಂದಿಗೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಪತ್ರದ ಪ್ರತಿಗಳನ್ನು ಗೋವಾ ರಾಜ್ಯದ ಮುಖ್ಯಮಂತ್ರಿ, ಪ್ರದಾನ ಮಂತ್ರಿ ಹಾಗೂ ಮಾನವ ಸಂಪನ್ಮೂಲ ಇಲಾಖೆಗೂ ಕಳುಹಿಸಿ ಕೊಡಲಾಗಿದೆ.

Comments are closed.