ಕುಂದಾಪುರ: ಸೋಮವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾದ ಯುವತಿಯೋರ್ವಳು ಮಂಗಳವಾರ ಅಸ್ವಸ್ಥ ಸ್ಥಿತಿಯಲ್ಲಿ ಮನೆಗೆ ವಾಪಾಸ್ಸಾಗಿದ್ದು ಆಕೆ ಪೋಷಕರು ಸಂತ್ರಸ್ತ ಯುವತಿಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಹೊಳೆ ಸಮೀಪದ ಎಳ್ಳೂರು ಮೂಲದ 20 ವರ್ಷ ಪ್ರಾಯದ ಯುವತಿ ಸೋಮವಾರ ಕಾರ್ಯ ನಿಮಿತ್ತ ಬೆಳಿಗ್ಗೆ ಕುಂದಾಪುರಕ್ಕೆ ಬಂದಿದ್ದು ಇಲ್ಲಿ ತನ್ನ ಕೆಲಸ ಮುಗಿಸಿ ಅಂಗಡಿಯಲ್ಲಿ ನೀರು ಬಾಟಲ್ ಖರೀದಿಸಿ ಬಸ್ ಏರಿದ್ದಾಳೆನ್ನಲಾಗಿದೆ. ಈತನ್ಮಧ್ಯೆ ಆಕೆ ಕೆಲಸ ಮುಗಿಸಿ ಮನೆಗೆ ಹೊರಟಿರುವ ಬಗ್ಗೆ ಮನೆಗೆ ಫೋನಾಯಿಸಿ ಖಚಿತಪಡಿಸಿದಳಾದರೂ ಆಕೆ ಸಂಜೆಯವರೆಗೂ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಆಕೆ ಮೊಬೈಲಿಗೆ ಕರೆ ಮಾಡಿದರೂ ಅದು ಸಂಪರ್ಕಕ್ಕೆ ಬಂದಿರಲಿಲ್ಲ.



ಯುವತಿ ಹೋಗಿದ್ದಾದರೂ ಎಲ್ಲಿಗೆ?
ತದನಂತರ ಬೆಳಿಗ್ಗೆನವರೆಗೂ ಕಾದ ಯುವತಿಯ ಪೋಷಕರು ಊರಿನ ಮುಖಂಡರನ್ನು ಸಂಪರ್ಕಿಸಿದ ಬಳಿಕ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಜ್ಜಾಗುತ್ತಾರೆ. ಆದರೇ ಅದೇ ವೇಳೆಗೆ ಯುವತಿ ಸಹೋದರ ಮೊಬೈಲಿಗೆ ಯುವತಿ ಮೊಬೈಲ್ ಸಂಖ್ಯೆಯಿಂದ ‘ ತಾನು ಮನೆಗೆ ಬರುತ್ತಿರುವುದಾಗಿ’ ತಿಳಿಸುತ್ತಾಳೆ. ಮಧ್ಯಾಹ್ನದವರೆಗೂ ಕಾದ ಮನೆಯವರು ಅಷ್ಟೋತ್ತಿಗೂ ಆಕೆ ಬಾರದಿದ್ದಾಗ ಪುನಃ ಠಾಣೆಗೆ ಹೋಗುತ್ತಾರೆ. ಆದರೇ ಅಷ್ಟೊತ್ತಿಗೆ ಆಕೆ ಮನೆಗೆ ಬಂದಿರುವ ಬಗ್ಗೆ ಮಹಿತಿ ಸಿಕ್ಕಿದ್ದು ಅವರು ಠಾಣೆಯಿಂದ ವಾಪಾಸ್ಸಾಗುತ್ತಾರೆ. ಅಷ್ಟಕ್ಕೂ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೂ ಯುವತಿ ಹೋಗಿದ್ದಾದರೂ ಎಲ್ಲಿಗೆ, ಆಕೆ ಎಲ್ಲಿದ್ದಳು ಎಂಬುದೇ ಈಗ ನಿಗೂಢ ಪ್ರಶ್ನೆಯಾಗಿದೆ.
ಅಸ್ವಸ್ಥಗೊಂಡಿದ್ದ ಯುವತಿ..
ಆಕೆ ಪೋಷಕರು ಹೇಳುವ ಪ್ರಕಾರ ಕೊಲ್ಲೂರು ಸಮೀಪದ ಹಾಲ್ಕಲ್ ತನಕವೂ ಆಕೆ ಬಸ್ಸಿನಲ್ಲಿ ಬಂದಿದ್ದು ಅಲ್ಲಿಂದ ಆಟೋ ರಿಕ್ಷಾದ ಮೂಲಕ ತನ್ನ ಮನೆಯವರೆಗೂ ಬಂದಿದ್ದಾಳೆ. ಮನೆಗೆ ಬರುವ ವೇಳೆ ಆಕೆ ಸಂಪೂರ್ಣವಾಗಿ ಅಸ್ವಸ್ಥವಾಗಿದ್ದು ಯಾವುದೇ ಮಾತುಗಳನ್ನು ಆಡುವ ಸ್ಥಿತಿಯಲ್ಲಿರಲಿಲ್ಲ. ಗಾಬರಿಗೊಂದ ಆಕೆ ಪೋಷಕರು ಯುವತಿಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಯುವತಿಯ ಕಿಡ್ಯಾಪ್ ಬಗ್ಗೆ ಆರೋಪ…
ಸಂತ್ರಸ್ತ ಯುವತಿ ತನ್ನ ಮನೆಯವರಲ್ಲಿ ಹೇಳಿರುವ ಪ್ರಕಾರ ಸೋಮವಾರ ಬಸ್ಸು ಏರಿದ ಬಳಿಕ ತಾನು ಪ್ರಜ್ನೆ ಕಳೆದುಕೊಂದಿದ್ದು ಎಲ್ಲಿದ್ದೆಯೆಂಬ ಬಗ್ಗೆಯೂ ತಿಳಿದಿಲ್ಲ ಎಂದಿದ್ದಾಳೆ ಎನ್ನಲಾಗಿದೆ. ತಾಲ್ಲೂಕಿನ ರಾಜಕೀಯ ಪಕ್ಷವೊಂದರಲಿ ಗುರುತಿಸಿಕೊಂಡ ಪ್ರಭಾವಿ ಸಹಿತ ಮೂವರ ಮೇಲೆ ಆರೋಪವನ್ನು ಯುವತಿ ಪೋಷಕರು ಮಾಡುತ್ತಿದ್ದು ಅವರೇ ಆಕೆಯನ್ನು ಅಪಹರಣ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಿಗಳ್ಯಾರೇ ಇದ್ದರೂ ಶಿಕ್ಷೆಯಾಗಲಿ..
ಬೈಂದೂರು ಭಾಗದಲ್ಲಿ ಹಲವು ಪ್ರಕರಣಗಳು ಈಗಾಗಲೇ ನಡೆದಿದ್ದು ಯುವತಿಯರಿಗೆ ಅನ್ಯಾಯವಾಗಿದೆ. ಈ ಪ್ರಕರಣದಲ್ಲಿ ನೊಂದ ಯುವತಿಯ ಹೇಳಿಕೆ ಪಡೆದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು. ಮತ್ತು ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕುಂದಪುರ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕುಂಭಾಸಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ರಾಘವ್ ಪಡೀಲ್ , ಎಸ್.ಐ. ಸಂತೋಷ್ ಕಾಯ್ಕಿಣಿ ಭೇಟಿ ನೀಡಿದ್ದು ಸಂತ್ರಸ್ತ ಯುವತಿ ಬಳಿ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಆದರೇ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾರಣ ಆಕೆ ಹೇಳಿಕೆ ಪಡೆಯಲು ಪೊಲೀಸರು ವಿಫಲವಾಗಿದ್ದಾರೆ. ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವತಿ ಹೇಳಿಕೆ ತರುವಾಯ ಸಂಪೂರ್ಣ ಪ್ರಕರಣದ ಸತ್ಯಾಸತ್ಯತೆಗಳು ತಿಳಿಯಲಿದೆ.
Comments are closed.