
ಮಂಗಳೂರು, ಆಗಸ್ಟ್.23:ನಾಳೆ ( ಬುಧವಾರ) ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಇಡೀ ಮಂಗಳೂರು ನಗರವೇ ಸಜ್ಜುಗೊಂಡಿದೆ. ಶ್ರೀ ಕ್ಷೇತ್ರ ಕದ್ರಿಯಲ್ಲಿ ನಾಳೆ ಕಲ್ಕೂರ ಪತ್ರಿಷ್ಠಾನದ ವತಿಯಿಂದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಜರುಗಲಿದ್ದು, ಜೊತೆಗೆ ಈ ಬಾರಿ ವಿಶೇಷವಾಗಿ ವಿನೂತನವಾದ ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಅತ್ತಾವರ, ಕದ್ರಿ, ಉರ್ವಾ, ಉರ್ವಾಸ್ಟೋರ್, ಸಂಘನಿಕೇತನ, ತೊಕ್ಕೊಟ್ಟು ಸೇರಿದಂತೆ ಮೊಸರು ಕುಡಿಕೆ ನಡೆಸುವ ಸ್ಥಳಗಳಲ್ಲಿ ಸಂಘಟಕರು ಕಂಬಗಳನ್ನು ನೆಟ್ಟು ಕುಡಿಕೆಗಳನ್ನು ಕಟ್ಟಿ ವ್ಯವಸ್ಥೆ ಮಾಡಿದ್ದಾರೆ.

ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಹೂವು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ. ಈ ಬಾರಿ ತರಕಾರಿ ಹಾಗೂ ಹೂ, ಹಣ್ಣುಗಳ ಬೆಲೆಗಳು ಗಗನಕೇರಿದ್ದರು ಮಾರುಕಟ್ಟೆಯಲ್ಲಿ ಮಾತ್ರ ವ್ಯಾಪರದ ಭರಟೆ ಕಡಿಮೆಯಾಗಲಿಲ್ಲ. ತರಕಾರಿ, ಮೂಡೆಗಳ ತೊಟ್ಟೆ, ಹೂವು, ತುಳಸೀದಳ, ಕೇದಗೆ ಹೂವುಗಳ ಮಾರಾಟದ ಭರಾಟೆ ಜೋತಾಗಿಯೇ ನಡೆದಿದೆ.
ಮಂಗಳೂರಿನ ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ, ಕಾಕಡ, ಕನಕಾಂಬರ, ಮಲ್ಲಿಗೆ, ಜಾಜಿ, ತಾವರೆ ಸೇರಿದಂತೆ ಸ್ಥಳೀಯ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ. ಸೆಂಟ್ರಲ್ ಮಾರ್ಕೆಟ್‌ನಲ್ಲಿ ಪ್ರಮುಖ ಸ್ಥಳೀಯ ತರಕಾರಿಗಳಾದ ಹರಿವೆ ದಂಟು, ಬೆಂಡೆ,ಮುಳ್ಳು ಸೌತೆ, ಅಲಸಂಡೆ, ಹಾಗಲಕಾಯಿ, ಹೀರೆ ಕಾಯಿ, ತೊಂಡೆಕಾಯಿ, ಶುಂಠಿ ಗಿಡ,ಮೂಡೆ, ಕೊಟ್ಟಿಗೆಗಳ ಬೆಲೆ ತುಂಬಾ ಏರಿಕೆಯಾಗಿದ್ದರೂ ಸಾಂಪ್ರದಾಯಪ್ರಿಯರು ಮಾತ್ರ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದಿಕೊಳ್ಳದೇ ಖರೀದಿಸುವುದು ಕಂಡು ಬಂತು.

ಕಲ್ಕೂರ ಪತ್ರಿಷ್ಠಾನದ ವತಿಯಿಂದ ವಿಶಿಷ್ಠ ಕಾರ್ಯಕ್ರಮ :


ಶ್ರೀಕೃಷ್ಣ ವರ್ಣ ವೈಭವಚಿತ್ರ ರಚನಾ ಸ್ಪರ್ಧೆ
ಶ್ರೀಕೃಷ್ಣ ವೇಷಸ್ಪರ್ಧೆ ರಾಷ್ಟ್ರೀಯ ಮಕ್ಕಳ ಉತ್ಸವದ ಅಂಗವಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಅಗಸ್ಟ್ ೨೪ರಂದು ಬೆಳಗ್ಗೆ ೯.೩೦ಕ್ಕೆ ಚಿತ್ರರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಶಿಶು (ಕೆ.ಜಿ. ವಿಭಾಗ), ಬಾಲ (೧ ರಿಂದ ೩ನೇ ತರಗತಿ), ಬಾಲ ಕಿಶೋರ (೪ರಿಂದ ೭ನೇ ತರಗತಿ) ಕಿಶೋರ (೮ರಿಂದ ೧೦ನೇ ತರಗತಿ), ತರುಣ (ಪಿಯುಸಿ/ತತ್ಸಮಾನ) ಮತ್ತು ಮುಕ್ತ ಸಾರ್ವಜನಿಕ ವಿಭಾಗವಿರುವುದು. ಶಿಶು ವಿಭಾಗ ಮತ್ತು ಬಾಲ ವಿಭಾಗದಲ್ಲಿ ಕೊಟ್ಟ ಚಿತ್ರಕ್ಕೆ ಬಣ್ಣ ಹಚ್ಚುವುದು. ಉಳಿದ ವಿಭಾಗದವರು ಕೃಷ್ಣನಿಗೆ ಸಂಬಂಧಿಸಿದ ಯಾವುದೇ ಚಿತ್ರವನ್ನು ರಚಿಸಬಹುದು. ಪ್ರಥಮ, ದ್ವಿತೀಯ, ತೃತೀಯ, ಬಹುಮಾನಗಳ ಜೊತೆಗೆ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಆಕರ್ಷಕ ಉಡುಗೊರೆ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಶ್ರೀಕೃಷ್ಣ ವರ್ಣವೈಭವದ ಸಂಚಾಲಕ ಶ್ರೀ ಜಾನ್ ಚಂದ್ರನ್ (೯೮೪೪೨೮೪೧೭೫) ಅವರನ್ನು ಸಂಪರ್ಕಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಅಗಸ್ಟ್ ೨೪, ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ
ಶ್ರೀಕ್ಷೇತ್ರ ಕದ್ರಿಯಲ್ಲಿ ಅಗಸ್ಟ್ ೨೪ರಂದು ಕಲ್ಕೂರ ಪತ್ರಿಷ್ಠಾನದ ವತಿಯಿಂದ ಜರಗಲಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ವಿನೂತನವಾದ ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಆಯೋಜಿಸಲಾಗಿದೆ.
ಕೃಷ್ಣನ ಕುರಿತಾದ ಜಾನಪದ, ಭಾವಗೀತೆ, ಭಕ್ತಿಗೀತೆಗಳನ್ನು ಹಾಡುವ ಸ್ಪರ್ಧೆ ಶ್ರೀಕೃಷ್ಣ ಗಾನ ವೈಭವ ೪ ವಿಭಾಗಗಳಲ್ಲಿ ನಡೆಯಲಿದೆ. ಶಿಶುವಿಭಾಗ (೧ ರಿಂದ ೪ನೇ ತರಗತಿ) ಬಾಲವಿಭಾಗ (೫, ೬, ೭ನೇ ತರಗತಿ) ಕಿಶೋರ ವಿಭಾಗ (೮, ೯, ೧೦ನೇ ತರಗತಿ) ತರುಣ ವಿಭಾಗ (ಪಿಯುಸಿ/ಡಿಗ್ರಿ) ೨೪ ಬುಧವಾರ ಬೆಳಿಗ್ಗೆ ೯.೩೦ರಿಂದ ಸ್ಪರ್ಧೆಯು ಆರಂಭಗೋಳ್ಳಲಿದ್ದು ಸ್ಥಳದಲ್ಲೇ ಹೆಸರನ್ನು ನೊಂದಾಯಿಸುವಂತೆ ಶ್ರೀ ಕೃಷ್ಣಗಾನ ವೈಭವದ ಸಂಚಾಲಕಿ ಡಾ| ಪ್ರತಿಭಾ ರೈ ತಿಳಿಸಿರುವರು. ಸಂಗೀತ ಪರಿಕರ, ಕೊರೋಕೆ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಗಾಯತ್ರಿ ನಾಗೇಶ್ (೯೭೪೨೫೧೭೩೦೦) ಅವರನ್ನು ಸಂಪರ್ಕಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
Comments are closed.