*ಯೋಗೀಶ್ ಕುಂಭಾಸಿ
ಕುಂದಾಪುರ: ದೇಶದ ಸೇನೆಯ ವಿರುದ್ಧ ಮತ್ತು ದೇಶದ ಸಾರ್ವಭೌಮತೆಯ ವಿರುದ್ಧ ಘೋಷಣೆ ಕೂಗಿದ್ದು ರಾಷ್ಟ್ರದ್ರೋಹವಾಗಿದ್ದು ಇಂತಹ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ದೇಶದ್ರೋಹಿ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯನ್ನು ನಿಷೇಧಿಸಬೇಕೆಂದು ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಆಗ್ರಹಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ.ಬಿ.ವಿ.ಪಿ.) ಕುಂದಾಪುರ ತಾಲೂಕು ವತಿಯಿಂದ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಆಗಸ್ಟ್ 13ರಂದು ಬೆಂಗಳೂರಿನಲ್ಲಿ ಅಮ್ನೆಸ್ಟಿ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿ ದೇಶದ ಹಾಗೂ ನಮ್ಮ ಸೈನ್ಯದ ವಿರುದ್ಧ ಘೋಷಣೆಕೂಗುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದು ಈ ಬಗ್ಗೆ ಕಳೆದ ಹತ್ತು ದಿನಗಳಿಂದಲೂ ಪ್ರತಿಭಟನೆ ಎಬಿವಿಪಿ ವತಿಯಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತೇವೆ. ಈ ಬಗ್ಗೆ ಎಬಿವಿಪಿ ರಾಜ್ಯನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಇಂತಹ ಸಂಸ್ಥೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಭಾರತದಲ್ಲಿ ದೇಶ ವಿರೋಧಿ ಕೃತ್ಯಗಳು ನಿಲ್ಲಿಸಬೇಕೆಂಬ ನಿಟ್ಟಿನಲ್ಲಿ ಹಾಗೂ ಸದ್ಯ ಬೆಂಗಳೂರಿನಲ್ಲಿ ನಡೆದ ಈ ಘಟನೆ ಮುಂದಿನ ದಿನಗಳಲ್ಲಿ ಮಂಗಳೂರು, ಕುಂದಾಪುರಕ್ಕೂ ವ್ಯಾಪಿಸಬಾರದೆಂಬ ಕಾರಣಕ್ಕಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ದೇಶದ್ರೋಹಿಗಳು ದೇಶದ ವಿರುದ್ಧ ಘೋಷಣೆ ಕೂಗಿದರೇ ನಾವು ದೇಶದ ಪರವಾಗಿ ಘೋಷಣೆ ಕೂಗುವುದರ ಜೊತೆ ನಮ್ಮ ಸೈನ್ಯದ ಪರವಾಗಿ ನಿಂತು ಕೆಲಸ ಮಾಡುತ್ತೇವೆ. ಅನ್ಯಾಯದ ಪರ ಹೋರಾಡುವವರ ವಿರುದ್ದವೇ ಹಲ್ಲೆ ನಡೆಸಲಾಗುತ್ತಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಆಗಬಾರದು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ನಗರದ ಶಾಸ್ತ್ರೀ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಹಾಗೂ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ವಿರುದ್ಧ ಫೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ಬಿ. ಕಿಶೋರ್ ಕುಮಾರ್, ಎ.ಬಿ.ವಿ.ಪಿ. ನಗರ ಕಾರ್ಯದರ್ಶಿ ವೈಭವ್, ಕಿಶನ್, ಬಿ.ಬಿ. ಹೆಗ್ಡೆ ಕಾಲೇಜು ಎ.ಬಿ.ವಿ.ಪಿ. ಅಧ್ಯಕ್ಷ ಸುಹಾಸ್, ಭಂಡಾರಕಾರ್ಸ್ ಕಾಲೇಜು ಎ.ಬಿ.ವಿ.ಪಿ ಕಾರ್ಯದರ್ಶಿ ರಕ್ಷಿತ್, ಕೋಟೇಶ್ವರ ಕಾಲೇಜು ಎ.ಬಿ.ವಿ.ಪಿಯ ಅಕ್ಷಯ್, ಬಸ್ರೂರು ಕಾಲೇಜಿನ ಪ್ರಥ್ವೀಶ್ ಮೊದಲಾದವರಿದ್ದರು.
Comments are closed.