ಕರಾವಳಿ

ರಾಜಸ್ಥಾನದಲ್ಲಿ ಅಪಹರಣಾಕೀಡಾದ ಮಂಗಳೂರಿನ ವ್ಯಕ್ತಿಯ ರಕ್ಷಣೆ : ಅರೋಪಿಗಳ ಸುಳಿವು ಲಭ್ಯ : ಕಮಿಷನರ್

Pinterest LinkedIn Tumblr

Commisnr_press_meet_1

ಮಂಗಳೂರು : ‘ಕಡಿಮೆ ಬೆಲೆಗೆ ಜನರೇಟರ್ ಲಭ್ಯವಿದೆ, ರಾಜಸ್ಥಾನಕ್ಕೆ ಬಂದು ನೋಡಿಕೊಂಡು ಹೋಗಿ’ ಎಂಬ ಕರೆಯನ್ನು ನಂಬಿ ರಾಜಸ್ಥಾನಕ್ಕೆ ತೆರಳಿದ್ದ ಬೋಂದೆಲ್ ನಿವಾಸಿ ರಿಚರ್ಡ್ ಮೇರಿಯನ್ ಲಾಝ್ರತ್(೩೪) ಅವರು ದುಷ್ಕರ್ಮಿಗಳ ತಂಡದಿಂದ ಅಪಹರಣಕ್ಕೊಳಗಾಗಿ, ಮೂರು ದಿನಗಳ ಕಾಲ ಅನ್ನ-ನೀರಿಲ್ಲದೆ ಗಂಭೀರ ಹಲ್ಲೆಗೊಳಗಾಗಿ ಕೊನೆಗೆ ಮಂಗಳೂರು ಮತ್ತು ರಾಜಸ್ಥಾನ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಬಂಧಮುಕ್ತ ವಾಗಿದ್ದು, ಇದೀಗ ಲಾಝ್ರತ್ ರನ್ನು ಅಪಹರಿಸಿದ ತಂಡದ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರನ್ನು ಶೀಘ್ರದಲ್ಲಿಯೆ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಲೋಸ್ಕರ್ ಜನರೇಟರ್ ಡೀಲರ್‌ಶಿಪ್ ಹೊಂದಿರುವ ಉದ್ಯಮಿ ಅರುಣ್ ಡಿಸೋಜಾ ಅವರಿಗೆ ರಾಜಸ್ಥಾನದ ಭರತ್ಪುರದಲ್ಲಿ ‘ಕಡಿಮೆ ಬೆಲೆಗೆ ಜನರೇಟರ್ ಲಭ್ಯವಿದೆ, 4 ಜನರೇಟರ್ ಇದೆ. ರಾಜಸ್ಥಾನಕ್ಕೆ ಬಂದು ನೋಡಿಕೊಂಡು ಹೋಗಿ’ ಎಂದು ದೂರವಾಣಿ ಕರೆಯೊಂದು ಬಂದಿದ್ದು, ಅದರಲ್ಲಿ ಮಾತಾಡಿದ ವ್ಯಕ್ತಿ ‘ನಿಮ್ಮ ನಂಬ್ರ ಇಂಟರ್‌ನೆಟ್‌ನಲ್ಲಿ ಸಿಕ್ಕಿತು. ನಮ್ಮಲ್ಲಿ ಕಡಿಮೆ ಬೆಲೆಗೆ ಜನರೇಟರ್ ಲಭ್ಯವಿದೆ. ನೀವು ಒಮ್ಮೆ ರಾಜಸ್ಥಾನದ ಭರತ್‌ಪುರಕ್ಕೆ ಬಂದು ನೋಡಿಕೊಂಡು ಹೋಗಿ’ ಎಂದು ಹೇಳಿದ್ದ. ಇದನ್ನು ನಂಬಿದ ಅರುಣ್, ರಿಚರ್ಡ್‌ರನ್ನು ಭರತ್‌ಪುರಕ್ಕೆ ಕಳುಹಿಸಲು ಮುಂದಾಗಿದ್ದು ಜುಲೈ ೨೮ಕ್ಕೆ ಕಳುಹಿಸಿಕೊಟ್ಟಿದ್ದರು. ಜುಲೈ ೩೦ರಂದು ರಾಜಸ್ಥಾನ ತಲುಪಿದ್ದ ರಿಚರ್ಡ್‌ರನ್ನು ಪಿಕ್‌ಅಪ್ ವಾಹನದಲ್ಲಿ ಬಂದಿದ್ದ ವ್ಯಕ್ತಿ ಕರೆದೊಯ್ದಿದ್ದ. ಬಳಿಕ ಅರುಣ್ ರ್‍ಈಘೇ ಫೋನ್ ಮಾಡಿಡಾ ಅಪರಿಚಿತ ವ್ಯಕ್ತಿ ಮತ್ತು ಆತನ ತಂಡ ರಿಚರ್ಡರನ್ನು ಜೀವಂತ ಬಿಡಬೇಕಾದರೆ 10ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿತ್ತು.

Commisnr_press_meet_2

ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯ ಎಎಸ್‌ಐ ವಿಜಯರಾಜು, ಹೆಡ್ಕಾನ್ಸ್ಟೇಬಲ್ ಮೋಹನ್ ಅವರನ್ನು ಭರತ್ಪುರಕ್ಕೆ ಕಳುಹಿಸಲಾಯಿತು. ಭರತ್ಪುರ ಐಜಿ ಅಲೋಕ್ ವಶಿಷ್ಟ, ಭರತ್ ಪುರ ಎಸ್ಪಿ ಕೈಲಾಸ್ ವಿಷ್ಣೋಯಿ, ಮಥುರಾ ಐಜಿ ದುರ್ಗಾಚರಣ್ ಮಿಶ್ರ ಮತ್ತು ಮಥುರ ಎಸ್‌ಎಸ್ಪಿ ಬಬ್ಲೂಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು ಅಪಹರಣಕ್ಕೋಳಗಾದ ರಿಚರ್ಡ್ ಮೇರಿಯನ್ ಲಾಝರತ್ರನ್ನು ರಕ್ಷಿಸಲಾಯಿತು ಎಂದು ತಿಳಿಸಿದರು.

ಭರತ್‌ಪುರಕ್ಕೆ ತೆರಳಿದ್ದ ಪೊಲೀಸ್ ತಂಡ ಅಲ್ಲಿ ಮೊಬೈಲ್ ಲೊಕೇಶನ್ ಸಹಾಯದಲ್ಲಿ ರಿಚರ್ಡ್ ಇರುವಿಕೆಯನ್ನು ಪತ್ತೆಹಚ್ಚಿ ರಾಜಸ್ಥಾನದ ಬಸ್ತಾನ ಎಂಬಲ್ಲಿಗೆ ದಾಳಿ ನಡೆಸಿ ಇಜಾಝ್ ಹಾಗೂ ಇನ್ನಿಬ್ಬರನ್ನು ವಶಕ್ಕೆ ಪಡೆದರೂ ಅಲ್ಲಿ ರಿಚರ್ಡ್ ಪತ್ತೆಯಾಗಲಿಲ್ಲ. ಇಜಾಝ್ ನೇತೃತ್ವದ ಮುಬಾರಿಕ್ ಗ್ಯಾಂಗ್‌ನಿಂದ ೮ ಬೈಕ್, ಬಂದೂಕು, ಗಾಂಜಾ, ಗುಂಡು ವಶಪಡಿಸಿಕೊಳ್ಳಲಾಯಿತು. ಅಪಹರಣಕಾರರು 7 ಕಡೆ ಸ್ಥಳವನ್ನು ಬದಲಾಯಿಸಿದ್ದು ಪೊಲೀಸರು ಮುಬಾರಕ್ ಗ್ಯಾಂಗ್ ಅನ್ನು ಹಿಡಿದಾಗ ಅಪಹರಣ ಮಾಡಿರುವ ಆರೋಪಿಗಳಿಗೆ ಮಾಹಿತಿ ತಿಳಿದು ರಿಚರ್ಡ್ ಮೇರಿಯನ್ ಲಾಝರತ್ ರನ್ನು ಬಿಟ್ಟು ಪರಾರಿಯಾಗಿದೆ.

ಗೋವರ್ಧನ್ ಪ್ರಾಂತ್ಯದ ಗದ್ದೆಯಲ್ಲಿ ಮರವೊಂದಕ್ಕೆ ಕಟ್ಟಿಹಾಕಿದ ಸ್ಥಿತಿಯಲ್ಲಿದ್ದ ರಿಚರ್ಡ್‌ರನ್ನು ಬಂಧಮುಕ್ತಗೊಳಿಸಲಾಗಿದೆ. ಮೂರು ದಿನಗಳ ಕಾಲ ಅನ್ನ, ನೀರಿಲ್ಲದೆ ಮಳೆಯಲ್ಲಿ ಬಸವಳಿದ ರಿಚರ್ಡ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಿಚರ್ಡ್‌ಗೆ ಕಾವಲಿದ್ದ ದರೋಡೆಕೋರರು ಪರಾರಿಯಾಗಿದ್ದು ಹುಡುಕಾಟ ನಡೆಯುತ್ತಿದೆ. ರಕ್ಷಣೆಗೊಳಗಾದ ರಿಚರ್ಡ್ ಮೇರಿಯನ್ ಲಾಝರತ್ ಮತ್ತು ಮಂಗಳೂರು ಪೊಲೀಸರು ಭರತ್ಪುರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.

ಹಿಂದೆ ಬಂಗಾರ ಸಿಕ್ಕಿದೆ ಎಂದು ಜನರನ್ನು ಮೋಸದ ಬಲೆಗೆ ಕೆಡವುತ್ತಿದ್ದ ತಂಡ ಇದೀಗ ಈ ರೀತಿಯ ಮೋಸದ ಬಲೆ ಬೀಸುತ್ತಿದೆ. 30 ಲಕ್ಷ ರೂ. ವೌಲ್ಯದ ಜನರೇಟರನ್ನು 5 ಲಕ್ಷಕ್ಕೆ ನೀಡುವ ಸುಳ್ಳು ಭರವಸೆ ನೀಡಿ ಈ ಅಪಹರಣ ಮಾಡಲಾಗಿದೆ. ಸಾರ್ವಜನಿಕರು ಭರತ್ಪುರದ ಸುತ್ತಮುತ್ತಲ ಪ್ರದೇಶದ ಜನರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿದ್ದು , ಖಚಿತಪಡಿಸಿದ ನಂತರ ವ್ಯವಹಾರಕ್ಕೆ ಇಳಿಯುವುದು ಉತ್ತಮ ಎಂದು ಹೇಳಿದರು.

ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಎಂ. ಪಾಟೀಲ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.