
ಮಂಗಳೂರು : ನಗರದ ಹೊರವಲಯದ ನೀರುಮಾರ್ಗ ಸಮೀಪದ ಬೊಂಡಂತಿಲ ಪಡು ಎಂಬಲ್ಲಿರುವ ಸೈಂಟ್ ಥೋಮಸ್ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್, ಉರ್ದು ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ಶಾಲೆಗೆ ದಾಳಿ ನಡೆಸಿದ 13ಕ್ಕೂ ಹೆಚ್ಚು ಶ್ರೀರಾಮಸೇನೆ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜು. 30ರಂದು ಬೆಳಿಗ್ಗೆ 9.45 ಕ್ಕೆ ಸುಮಾರು 40 ಮಂದಿಯ ತಂಡವೊಂದು ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮುತ್ತಿಗೆ ಹಾಕಿ ಅರಬಿಕ್ , ಉರ್ದು ಪಾಠ ಕಲಿಸದಂತೆ ಅಧ್ಯಾಪಕರನ್ನು ಒತ್ತಾಯಿಸಿತ್ತು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್ ಮತ್ತು ಉರ್ದು ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ರಾಮಸೇನೆಯ 40ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಾದ ಬೊಮಡಂತಿಲ ಪರಿಸರದ ಸಂತೋಷ್ (30), ನಿತಿನ್ (33)ಮತ್ತು ದಿನೇಶ್ (27) ಸೇರಿದಂತೆ ಬೊಂಡಂತಿಲ ವಾಸಿಗಳಾದ ಸುನಿಲ್, ರಾಜೇಶ್, ರಾಘವೇಂದ್ರ, ರವಿ, ನಿತಿನ್ ಶೆಟ್ಟಿ, ಕಿಶೋರ್ ಸನಿಲ್, ಚೇತನ್, ರವೀಂದ್ರ, ಮುಖೇಶ್, ಪ್ರಕಾಶ, ಜಯಂತ ಮತ್ತು ಚಂದ್ರಹಾಸ ಎಂಬ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ.
ಘಟನೆ ಬಗ್ಗೆ ಸಂಪೂರ್ಣ ವಿವರ :
ದಿನಾಂಕ: 30/7/2016 ರಂದು ಮದ್ಯಾಹ್ನ 12-30 ಗಂಟೆಗೆ ಮುಖ್ಯ ಶಿಕ್ಷಕರು, ಸಂತ ಥೋಮಸರ ಹಿ.ಪ್ರಾ.ಶಾಲೆ, ಬೊಂಡಂತಿಲ ಗ್ರಾಮ, ಮಂಗಳೂರು ಎಂಬವರು ನೀಡಿದ ಪಿರ್ಯಾದಿ ಏನೆಂದರೆ ಪ್ರಸ್ತುತ ಸರಕಾರಿ ಅನುದಾನಿತ ಈ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಯಲ್ಲಿ ವಿದ್ಯಾರ್ಥಿಗಳ ಹೆತ್ತವರ ಅಪೇಕ್ಷೆ- ಅನುಮತಿಯ ಮೇರೆಗೆ ಇತರ ಭಾಷೆಗಳಾದ ಫ್ರೆಂಚ್, ಜರ್ಮನ್, ಅರೇಬಿಕ್, ಕರಾಟೆ ತರಗತಿಗಳನ್ನು ನಡೆಸಲಾಗುತ್ತಿದ್ದು, ದಿನಾಂಕ: 30/7/2016 ರಂದು ಬೆಳಿಗ್ಗೆ ಸುಮಾರು 9-45 ತರಗತಿ ನಡೆಸುತ್ತಿದ್ದಾಗ ಶ್ರೀ ರಾಮ ಸೇನೆ ಸಂಘಟನೆಗೆ ಸೇರಿದವರೆಂದು ಹೇಳಿಕೊಂಡ ಸುಮಾರು 30 ರಷ್ಟು ಆರೋಪಿಗಳು ಏಕಾಏಕಿಯಾಗಿ ತರಗತಿಯೊಳಗೆ ಅಕ್ರಮ ಪ್ರವೇಶ ಮಾಡಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾಗಿ ನೀಡಿದ ದೂರಿನಂತೆ ಅ,ಕ್ರ, 300/2016 ಕಲಂ: 143,147.448,353 ಜೊತೆಗೆ 149 ಭಾ.ದಂ.ಸಂ.ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ದಿನಾಂಕ 31-07-2016 ರಂದು ಪ್ರಕರಣದಲ್ಲಿ ಅರೋಪಿಗಳಾದ ಬೊಂಡಂತಿಲ ಪರಿಸರದ ನಿವಾಸಿಗಳಾದ ಸಂತೋಷ್, ನಿತಿನ್, ದಿನೇಶ್ ಎಂಬ ಮೂವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂದನವನ್ನು ವಿಧಿಸಿರುತ್ತದೆ.
ಹಾಗೂ ದಿನಾಂಕ 01-08-2016 ರಂದು ಪ್ರಕರಣದಲ್ಲಿ ಅರೋಪಿಗಳಾದ ಬೊಂಡಂತಿಲ ವಾಸಿಗಳಾದ ಸುನಿಲ್, ನಿತಿನ್, ರಾಜೇಶ್, ರಾಘವೇಂದ್ರ, ರವಿ, ನಿತಿನ್ ಶೆಟ್ಟಿ, ಕಿಶೋರ್ ಸನಿಲ್, ಚೇತನ್, ರವೀಂದ್ರ, ಮುಖೇಶ್, ಪ್ರಕಾಶ, ಜಯಂತ ಮತ್ತು ಚಂದ್ರಹಾಸ ಎಂಬ 13 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 16 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಅಯುಕ್ತರಾದ ಶ್ರುತಿ ರವರ ಮಾರ್ಗದರ್ಶನದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಗಳಾದ ಸುಧಾಕರ್ ಹಾಗೂ ವೆಂಕಟೇಶ್ ಮತ್ತು ಸಿಬ್ಬಂದಿಯವರು ಆರೋಪಿಗಳ ಬಂಧನದ ಕಾರ್ಯ ನಿರ್ವಹಿಸಿರುತ್ತಾರೆ.
Comments are closed.