
ಮಂಗಳೂರು:ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಬಿಳಿಮಾರು ಎಂಬಲ್ಲಿ ಪಲ್ಟಿಯಾದ ಘಟನೆ ನಡೆದಿದ್ದು, ಘಟನೆಯಿಂದ ಈ ರಸ್ತೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡಿದರು.
ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಚಾಲಕ ತಮಿಳುನಾಡು ಮೂಲದ ಲೋಕಾನಂದ (32) ಗಾಯಗೊಂಡಿದ್ದಾರೆ.
ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗದ ಕಾರಣ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ. ಈ ಬೆನ್ನಲ್ಲೇ ರಸ್ತೆ ಸಂಚಾರ ಸ್ಥಗಿತಗೊಳಿಸಿ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಅನಿಲ ಸೋರಿಕೆಯಿಂದಾಗಬುಹುದಾದ ಅನಾಹುತ ತಪ್ಪಿಸಿದ್ದಾರೆ.
ಘಟನೆಯಿಂದ ಸುಮಾರು 6 ಗಂಟೆಗಳ ಕಾಲ ಈ ಭಾಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಟ್ಯಾಂಕರ್ ಪಲ್ಟಿ ಹಿನ್ನೆಲೆಯಿಂದಾಗಿ ಮಾಣಿ-ಪುತ್ತೂರು ಮಾರ್ಗವಾಗಿ ಸಂಚಾರ ಬದಲಾವಣೆ ಮಾಡಲಾಗಿದ್ದು, ಟ್ಯಾಂಕರ್ ತೆರವುಗೊಳಿಸಿದ ಬಳಿಕ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆಯ ಎಸ್ಐ ತಿಮ್ಮಪ್ಪ ನಾಯ್ಕಿ, ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಸಂಚಾರಿ ಠಾಣೆಯ ಎಸ್ಐ ನಾಗರಾಜ್ ಸಹಿತ ಸಿಬ್ಬಂದಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
Comments are closed.