ಕರಾವಳಿ

ವಾಯಸೇನಾ ವಿಮಾನದಲ್ಲಿ ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಮನೆಗೆ ಸಚಿವ ಡಿ.ವಿ.ಎಸ್ ಭೇಟಿ : ಕುಟುಂಬಕ್ಕೆ ಸಾಂತ್ವನ

Pinterest LinkedIn Tumblr

Dvs_Visit_Belthanagadi

ಬೆಳ್ತಂಗಡಿ : ಜು. 22 ರಂದು ವಾಯಸೇನಾ ವಿಮಾನದಲ್ಲಿ ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಅವರ ಗುರುವಾಯನಕೆರೆಯಲ್ಲಿನ ಮನೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಭೇಟಿ ನೀಡಿ ಯೋಧನ ಪತ್ನಿ ಜಯಂತಿ ಅವರಿಗೆ ಸಾಂತ್ವನ ಹೇಳಿದರು.

ಯೋಧನ ಸೇನಾ ಜೀವನದ ವಿವರಗಳನ್ನು ಮನೆಯವರಿಂದ ಪಡೆದುಕೊಂಡ ಡಿವಿ ಅವರು ಕೇಂದ್ರ ಮತ್ತು ರಾಜ್ಯದ ಸರಕಾರದ ವತಿಯಿಂದಾಗುವ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ಇತ್ತರು. ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿ ಸಮಾಧಾನ ಹೇಳಿದರು.

ಏಕನಾಥ ಶೆಟ್ಟಿಯವರ ಇಬ್ಬರು ಮಕ್ಕಳಾದ ಆಶಿಕಾ ಹಾಗೂ ಅಕ್ಷಯ್ ಅವರಿಗೆ ಸಮಾಧಾನ, ಧೈರ್ಯ ಹೇಳಿದರು. ಬಳಿಕ ಯೋಧನ ಪತ್ನಿ ಜಯಂತಿಯವರ ಪ್ರಸ್ತುತ ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ಭರವಸೆ ನೀಡಿದರು.

ದೇಶ ಸೇವೆಗೆ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡ ವೀರ ಯೋಧನನ್ನು ನಾವು ಕಳೆದುಕೊಂಡಿದ್ದೇವೆ. ನಿವೃತ್ತಿಯಾದ ಸಂದರ್ಭದಲ್ಲಿ ವಿವಿಧ ಬ್ಯಾಂಕ್‍ಗಳ ಹುದ್ದೆಗೆ ಆಯ್ಕೆಯಾಗಿದ್ದರೂ ಅದರತ್ತ ಗಮನಹರಿಸದೆ ಮತ್ತೆ ಸೇನೆಗೆ ಸೇರಿ ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಇಂತಹ ಉದಾಹರಣೆ ಸಿಗುವುದು ಅಪೂರ್ವವಾಗಿದೆ ಎಂದು ಈ ಸಂದರ್ಭದಲ್ಲಿ ಡಿ.ವಿ.ಎಸ್ ಹೇಳಿದರು.

ಬಂಗಾಲಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಿಮಾನದ ಕುರುಹು ಇನ್ನೂ ಲಭ್ಯವಾಗಿಲ್ಲ. ಆದರೂ ಕೇಂದ್ರ ಸರಕಾರ ಸರ್ವ ರೀತಿಯ ಪ್ರಯತ್ನ ನಡೆಸುತ್ತಿದೆ. ಈ ವಿಚಾರದಲ್ಲಿ ನಮ್ಮ ಸರಕಾರ ಯಾವುದನ್ನೂ ಕಡೆಗಣಿಸುವುದಿಲ್ಲ. ಅಮೇರಿಕಾದಿಂದ ವಿಶೇಷ ಹುಡುಕಾಟದ ತಜ್ಞರನ್ನು ಕರೆಸಿಕೊಳ್ಳಲಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರೀಕರ್ ಅವರು ನಿಮ್ಮ ಊರಿನ ಯೋಧನ ವಿಚಾರದಲ್ಲಿ ವಿಚಾರಣೆ ಮಾಡಿದ್ದಾರೆ. ದೇಶವನ್ನು, ನಮ್ಮನ್ನು ರಕ್ಷಣೆ ಮಾಡುವ ಯೋಧರ ವಿಚಾರದಲ್ಲಿ ರಕ್ಷಣಾ ಇಲಾಖೆ ನಿಮ್ಮೊಂದಿಗಿದೆ ಎಂದು ತಿಳಿಸಿ ಎಂದು ಹೇಳಿದ್ದಾರಲ್ಲದೆ ಮನೆಯವರ ಬಗ್ಗೆ ಯಾವುದೇ ವಿಚಾರದಲ್ಲಿ ಪ್ರಥಮ ಆದ್ಯತೆಯ ಮೇರೆಗೆ ಕೇಂದ್ರ ಸರಕಾರ ಜೊತೆಗಿದೆ ಎಂದು ತಿಳಿಸಿದ್ದಾರೆ ಇಡೀ ದೇಶ ಏಕನಾಥ ಶೆಟ್ಟಿ ಅವರ ಕುಟುಂಬದವರೊಂದಿಗೆ ಇದೆ ಎಂದು ಹೇಳಿದರು.

ಈ ವೇಳೆ ಸಂದರ್ಭ ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ಯೋಗಿಶ್ ಭಟ್, ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೆಶ್ ಚೌಟ, ಕೋಶಾಧಿಕಾರಿ ಸಂಜಯ್ ಪ್ರಭು, ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಕಾರ್ಯದರ್ಶಿ ಸೀತಾರಾಮ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಸದಸ್ಯ ಗೋಪಿನಾಥ ನಾಯಕ್, ಮಾಜಿ ಸದಸ್ಯರಾದ ಜಯಂತ ಕೋಟ್ಯಾನ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್, ಸದಸ್ಯರಾದ ವೃಷಭ ಆರಿಗ, ಪುರಂದರ ಶೆಟ್ಟಿ, ಮುಖಂಡರಾದ ಅಶೋಕ್ ರೈ ಪುತ್ತೂರು, ನಾರಾಯಣ ಆಚಾರ್, ಮಾಜಿ ಸೈನಿಕರ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಸಚಿವರ ಜೊತೆಗಿದ್ದರು.

Comments are closed.