ಕರಾವಳಿ

ಚತುಷ್ಪಥ ಅವಾಂತರ: ಸಂಪರ್ಕ ಕಳೆದುಕೊಳ್ಳುತ್ತಿರುವ ಕೋಟೇಶ್ವರ-ಬೀಜಾಡಿ ರಸ್ತೆ; ಸೂಕ್ತ ಕ್ರಮಕ್ಕೆ ಒತ್ತಾಯ

Pinterest LinkedIn Tumblr

ಕುಂದಾಪುರ: ಚತುಷ್ಪಥ ರಸ್ತೆ ನಿರ್ಮಾಣ ಕೋಟೇಶ್ವರ ಪೇಟೆಯನ್ನು ಬಾಹ್ಯ ಸಂಪರ್ಕದಿಂದ ಪ್ರತ್ಯಕಿಸುತ್ತದೆ. ಸೂಕ್ತ ಸರ್ವೀಸ್ ರಸ್ತೆ ಇಲ್ಲ, ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ನಿರ್ವಹಣಾ ಸಂಸ್ಥೆ ಸ್ಥಳೀಯರ ಅಹವಾಲುಗಳಿಗೆ ಸ್ಪಂದಿಸದೇ ಇವತ್ತು ಸಮಸ್ಯೆ ಸೃಷ್ಟಿಸಿದೆ. ಕೋಟೇಶ್ವರ ಪೇಟೆಯೊಳಗೆ ಬಸ್ ಮತ್ತಿತರ ವಾಹನಗಳಿಗೆ ಬೀಜಾಡಿ ಕ್ರಾಸ್‌ನಲ್ಲಿ ಪ್ರವೇಶ ನೀಡಬೇಕು. ಸರ್ವೀಸ್ ರಸ್ತೆಗಳು ನಿರ್ಮಾಣ ಮಾಡಬೇಕು ಎಂದು ಕೋಟೇಶ್ವರ, ಬೀಜಾಡಿ, ಗೋಪಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಟೇಶ್ವರದ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ನಿರ್ಮಾಣದ ವೇಳೆ ಕೋಟೇಶ್ವರ ಗ್ರಾಮವನ್ನು ಗಂಭೀರವಾಗಿ ಪರಿಗಣಿಸದ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂತು.

?

?

?

?

?

?

?

?

?

?

?

?

?

?

?

ರಾಷ್ಟ್ರೀಯ ಹೆದ್ದಾರಿ ಅಭಿಯಂತರ ವೀರೇಂದ್ರ ಅವರು ಮಾತನಾಡಿ, ಸಾರ್ವಜನಿಕರ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಇಲ್ಲಿನ ಜನರ ಬೇಡಿಕೆ ನ್ಯಾಯಯುತವಾಗಿದ್ದು, ಪರಿಹರಿಸಲು ಪ್ರಯತ್ನ ಮಾಡಲಾಗುವುದು. ಸರ್ವೀಸ್ ರಸ್ತೆ ನಿರ್ಮಾಣ ಹೆದ್ದಾರಿಯ ಮ್ಯಾಪ್‌ನಲ್ಲಿ ಇದ್ದರೆ ಅದರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಇಲ್ಲದಿದ್ದರೆ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಸೇರ್ಪಡೆಯ ಬಗ್ಗೆ ಚರ್ಚಿಸಲಾಗುವುದು ಎಂದರು.

ಈ ಉತ್ತರ ಜನರಿಗೆ ತೃಪ್ತಿ ತರಲಿಲ್ಲ. ರಸ್ತೆ ನಿರ್ಮಾಣದ ಬಗ್ಗೆ ಡಿಪಿ‌ಆರ್ ಆಗಲಿ ಮಾಹಿತಿ ಹಕ್ಕು ಪ್ರಕಾರ ಮಾಹಿತಿ ಕೇಳಿದರೂ ಮಾಹಿತಿ ಸಿಗುತ್ತಿಲ್ಲ. ರಸ್ತೆ ನಿರ್ಮಾಣದ ಮುಂಚೆ ಸ್ಥಳೀಯವಾಗಿ ಅಧ್ಯಯನ ಮಾಡಿಲ್ಲ, ತರಾತುರಿಯಲ್ಲಿ ಟೋಲ್ ವಸೂಲಿಗೆ ಮುಂದಾಗಿರುವ ಕಂಪೆನಿ ಸ್ಥಳೀಯರ ಹಿತವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.

ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ, ರಸ್ತೆ ನಿರ್ಮಾಣದ ನೀಲ ನಕಾಸೆ ತರಿಸಿಕೊಂಡು ಪರಿಶೀಲಿಸುತ್ತೇವೆ. ಇಲ್ಲಿ ಉಂಟಾಗುವ ಸಂಚಾರ ಸಮಸ್ಯೆಯನ್ನುಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಈಗಾಗಲೇ ಬ್ಯಾರಿಕೆಟ್ ಅಳವಡಿಸುವ ಕೆಲಸ ಆಗಿದೆ. ಕೋಟೇಶ್ವರ ಅಂಡಾರ್‌ಪಾಸ್‌ಗೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಂಡಾರ್‌ಪಾಸ್ ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳವಾಗದೇ ಸಂಚಾರಕ್ಕೆ ಸುಗಮವಾಗುವ ನಿಟ್ಟಿನಲ್ಲಿ ಕ್ರಮ ಜರಗಿಸಲಾಗುವುದು ಎಂದರು.

ಜಿ.ಪಂ.ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಮಾತನಾಡಿ, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಡಬೇಕಾಗಿದೆ. ಇದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು. ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ ಮಾತನಾಡಿ, ಹೆದ್ದಾರಿ ನಿರ್ಮಾಣದಿಂದ ಇಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ತಗೆದುಕೊಂಡು ಪರಿಹರಿಸಬೇಕು ಎಂದು ಆಗ್ರಹಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಉದಯ ನಾಯಕ್ ಮಾತನಾಡಿ, ಅತೀ ದೊಡ್ಡ ಪಂಚಾಯತ್ ಆಗಿರುವ ಕೋಟೇಶ್ವರ ಬೀಜಾಡಿ ಸಂಪರ್ಕ ರಸ್ತೆ ಬಂದ್ ಮಾಡಿದರೆ ಕೋಟೇಶ್ವರದ ದೇವಸ್ಥಾನ, ಈಲ್ಲಿನ ಶಾಲಾ ಕಾಲೇಜುಗಳು, ವಾಣಿಜ್ಯ ವ್ಯವಹಾರಗಳು, ಬ್ಯಾಂಕಿಂಗ್ ಸಂಸ್ಥೆಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಡಿವೈಡರ್ ತೆರವು ಮಾಡಿ ಸಂಚಾರ ಮುಕ್ತಗೊಳಿಸಬೇಕು ಎಂದರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ ಮಾತನಾಡಿ ಕೋಟೇಶ್ವರದ ಅಂಡಾರ್‌ಪಾಸ್‌ನಲ್ಲಿ ೧೨ಚಕ್ರದ ವಾಹನಗಳು ಹೋಗಬಹುದು. 16 ಚಕ್ರದ ವಾಹನಗಳು ಹೋಗಲು ಸಾಧ್ಯವಿಲ್ಲ. ಉಡುಪಿಯಂತೆ ಇಲ್ಲಿಯೂ ಎರಡು ವಿಭಾಗ ಮಾಡಬೇಕಿತ್ತು ಎಂದರು. ಗೋಪಾಡಿ ಗ್ರಾ.ಪಂ.ಸದಸ್ಯ ಸುರೇಶ ಶೆಟ್ಟಿ ಮಾತನಾಡಿ, ಗ್ರಾಮಪಂಚಾಯತ್‌ನಲ್ಲಿ ಕೇವಲ 10-15ಲಕ್ಷದ ಯೋಜನೆ ರೂಪಿಸುವಾಗ ಹಲವು ಸಭೆಗಳು ಆಗುತ್ತವೆ. ಆದರೆ ಬಹುದೊಡ್ಡ ರಸ್ತೆ ಕಾಮಗಾರಿ ನಡೆಸುವಾಗ ಸ್ಥಳೀಯಾಡಳಿತವನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ನಡೆಸಲಾಗಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ ಎಂದರು.

ಕೋಟೇಶ್ವರಕ್ಕೆ ಹೈವೆಯಲ್ಲಿ ಬಸ್ ನಿಲ್ದಾಣ ಮಾಡಬೇಕು ಎಂಬ ಒಕ್ಕೋರಲ ಆಗ್ರಹ ವ್ಯಕ್ತವಾಯಿತು. ಕೋಟೇಶ್ವರ ಹಿಂದೂ ರುದ್ರಭೂಮಿಯ ಹತ್ತರ ಬಸ್ ನಿಲ್ದಾಣ ಮಾಡುವಂತೆ ಆಗ್ರಹ ಕೆಳಿ ಬಂತು. ಕೋಟೇಶ್ವರ ಪೇಟೆಯೊಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಡಿವೈಡರ್ ಮುಕ್ತಗೊಳಿಸಬೇಕು, ಬೀಜಾಡಿ ರಸ್ತೆ ಸಂಪರ್ಕಿಸಬೇಕು, ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸಭೆಯಲ್ಲಿ ಕೋಟೇಶ್ವರ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಬಿಲ್ಲವ, ತಾ.ಪಂ.ಸದಸ್ಯೆ ವೈಲೆಟ್ ಬರೆಟ್ಟೋ, ರೂಪಾ ಪೈ, ಕುಂದಾಪುರ ಸಂಚಾರ ಠಾಣೆಯ ಜಯ, ಇಂಜಿನಿಯರ್ ರಾಘವೇಂದ್ರ, ರವಿಂದ್ರ ದೊಡ್ಮನೆ, ಗಜೇಂದ್ರ ಶೆಟ್ಟಿ ಗೋಪಾಡಿ, ಗುರುರಾಜ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಅಧಿಕಾರಿಗಳ ಸಮಕ್ಷಮದಲ್ಲಿ ಬೀಜಾಡಿ ಕ್ರಾಸ್, ಕುಂದಾಪುರದಿಂದ ಕೋಟೇಶ್ವರ ಪ್ರವೇಶ ರಸ್ತೆ, ಬಸ್ ನಿಲ್ದಾಣ ಪ್ರಸ್ತಾವಿತ ಪ್ರದೇಶಗಳ ವೀಕ್ಷಣೆ ನಡೆಯಿತು.

Comments are closed.