ಕರಾವಳಿ

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Pinterest LinkedIn Tumblr

DC_Ibrahim_Sendof_1

ಮಂಗಳೂರು, ಜು.31: ದ.ಕ. ಜಿಲ್ಲೆಯ 126ನೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿರುವ, ಎ.ಬಿ. ಇಬ್ರಾಹೀಂರವರಿಗೆ ದ.ಕ. ಜಿಲ್ಲಾಡಳಿತದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರಿಗೆ ಜಿಲ್ಲಾಡಳಿತ ಪರವಾಗಿ ಮಂಗಳೂರು ದರ್ಶನ ಪುಸ್ತಕವನ್ನು ನೀಡಿ ಸನ್ಮಾನ ಮಾಡುವ ಮೂಲಕ ಬೀಳ್ಕೊಡಲಾಯಿತು.

ಹೃದಯಸ್ಪರ್ಶಿ ಬೀಳ್ಕೊಡುಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು, ಸರಕಾರದ ಗುರಿ ಹಾಗೂ ಉದ್ದೇಶಗಳನ್ನು ಈಡೇರಿಸುವಲ್ಲಿ ಕೆಲವೊಂದು ಕಠಿಣ ನಿರ್ಧಾರಗಳನ್ನು ಜಿಲ್ಲಾಧಿಕಾರಿಯಾಗಿ ಕೈಗೊಳ್ಳುವ ಸನ್ನಿವೇಶ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗೊಂದು ಮರಳು ನೀತಿ ರೂಪಿಸುವಲ್ಲಿ ವಿಫಲವಾಗಿರುವ ಬಗ್ಗೆ ವಿಷಾದವಿದೆ ಎಂದು ತಿಳಿಸಿದರು.

DC_Ibrahim_Sendof_2 DC_Ibrahim_Sendof_3 DC_Ibrahim_Sendof_4 DC_Ibrahim_Sendof_5 DC_Ibrahim_Sendof_6 DC_Ibrahim_Sendof_7

ದ.ಕ. ಜಿಲ್ಲೆಗೆ ಮರಳು ನೀತಿ ರೂಪಿಸಲು ಸಾಕಷ್ಟು ಗೊಂದಲದಿಂದಾಗಿ ಸಾಧ್ಯವಾಗಿಲ್ಲ. ಇದರ ಜತೆಯಲ್ಲೇ ಅಧಿಕಾರಿಗಳ ಕೊರತೆಯೂ ಜಿಲ್ಲೆಗೆ ಅಭಿವೃದ್ಧಿಗೆ ಬಾಧಕವಾಗುತ್ತಿದೆ. ತಾಲೂಕುಗಳಲ್ಲಿ ತಹಶೀಲ್ದಾರರಿಲ್ಲದಿರುವುದು, ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಸರಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ ಬದಲಾವಣೆಗೆ ಸಾಧ್ಯವಾಗಿಲ್ಲ. ಮಹಾನಗರ ಪಾಲಿಕೆಯ ಹಂಪನಕಟ್ಟೆ ಹಾಗೂ ಫಳ್ನೀರ್ನಂತಹ ಪ್ರಮುಖ ರಸ್ತೆಗಳಲ್ಲೇ ಫುಟ್ಪಾತ್ ಇಲ್ಲದಿರುವುದು ಬೇಸರದ ಸಂಗತಿ. ದ.ಕ. ಜಿಲ್ಲೆಗೊಂದು ರಂಗ ಮಂದಿರಕ್ಕಾಗಿ ಕಳೆದೆರಡು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಪಟ್ಟರೂ ಆ ಬಗ್ಗೆ ನೋವಿದೆ ಎಂದು ಅವರು ಹೇಳಿದರು.

DC_Ibrahim_Sendof_8 DC_Ibrahim_Sendof_9 DC_Ibrahim_Sendof_10 DC_Ibrahim_Sendof_11 DC_Ibrahim_Sendof_12

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜತೆಗಿನ ಒಡನಾಟದ ಬಗ್ಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, 2ವರ್ಷ 7 ತಿಂಗಳ ಕಾಲ ದ.ಕ. ಜಿಲ್ಲೆಯಲ್ಲಿ ಜನ ಸಾಮಾನ್ಯರ ಮನಗೆದ್ದ ಅವರ ಆಡಳಿತ ವೈಖರಿ, ಕ್ರಿಯಾಶೀಲತೆ, ನಮ್ಮಂತಹ ಯುವ ಅಧಿಕಾರಿಗಳಿಗೆ ಸ್ಪೂರ್ತಿದಾಯಕ. 50ರ ಹರೆಯದಲ್ಲೂ 25ರ ಯುವ ಅಧಿಕಾರಿಯಂತೆ ಕರ್ತವ್ಯ ನಿರ್ವಹಿಸುವ ಮೂಲಕ ಹೃದಯವಂತಿಕೆ ಇರುವವನಿಂದ ಮಾನವೀಯತೆಯಿಂದ ಕೆಲಸ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.ಬೆಳಗ್ಗೆ 9 ಗಂಟೆಯಿಂದ ರಾತ್ರಿ ಸುಮಾರು 10 ಗಂಟೆಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಏಕೈಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಎಂದು ಪ್ರಶಂಸಿಸಿದರು.

ವೇದಿಕೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ರಾವ್ ಬೊರಸೆ, ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಪುತ್ತೂರು ಸಹಾಯಕ ಆಯುಕ್ತರಾದ ಡಾ. ರಾಜೇಂದ್ರ , ಉಪ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಪತ್ರಕರ್ತರ ಆತ್ಮಭೂಷಣ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪ್ರಮೋದ್ರವರ ಭಾವಗೀತೆಯೊಂದಿಗೆ ಬೀಳ್ಕೊಡುಗೆ ಸಮಾರಂಭ ಆರಂಭಗೊಂಡಿತು. ಡಾ. ಅಶೋಕ್ ಸ್ವಾಗತಿಸಿದರು. ಡಾ. ರಾಜೇಂದ್ರ ವಂದಿಸಿದರು.

Comments are closed.