*ಯೋಗೀಶ್ ಕುಂಭಾಸಿ
ಕುಂದಾಪುರ: ತಾಲ್ಲೂಕಿನ ಬಿದ್ಕಲ್‌ಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕಿಯರ ವರ್ಗಾವಣೆ ಕುರಿತು ಸಮಸ್ಯೆ ತಲೆದೋರಿದೆ. ಈ ಬಗ್ಗೆ ಶಾಲಾ ಎಸ್.ಡಿ.ಎಂ.ಸಿ ಹಾಗೂ ಪೋಷಕರು ಗರಂ ಆಗಿದ್ದು ವಿದ್ಯಾರ್ಥಿಗಳ ಜೊತೆಗೆ ಶಾಲೆಯೆದುರು ಒಂದೆರಡು ದಿನದಿಂದ ಪ್ರತಿಭಟನೆಗಿಳಿದಿದ್ದಾರೆ.
ಶುಕ್ರವಾರ ಶಾಲೆಯೆದುರು ಈ ಬಗ್ಗೆ ಎಸ್.ಡಿ.ಎಂ.ಸಿ ಹಾಗೂ ಪೋಷಕರು ಜಮಾಯಿಸಿ ಶಾಲೆಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳನ್ನು ಇಡೀ ದಿನ ಹೊರಗೆ ಕೂರಿಸಿದ್ದರೂ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲೀ ಅಥವಾ ಇಲಾಖೆಗೆ ಸಂಬಂದಪಟ್ಟ ಯಾವುದೇ ಅಧಿಕಾರಿಗಳಾಗಲೀ ಸ್ಥಳಕ್ಕೆ ಬಂದು ಮನವಿ ಆಲಿಸುವ ಕಾರ್ಯ ಮಾಡಿರಲಿಲ್ಲ. ಈ ಬಗ್ಗೆ ಇನ್ನಷ್ಟು ಆಕ್ರೋಶಗೊಂಡ ಪೋಷಕರು ಹಾಗೂ ಎಸ್.ಡಿ.ಎಂ.ಸಿ. ಅವರು ಶನಿವಾರ ಬೆಳಿಗ್ಗೆ ಶಾಲೆಗೆ ಬೀಗ ಜಡಿದರು. ಬಿದ್ಕಲ್‌ಕಟ್ಟೆಯ ಸಂಪೂರ್ಣ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಲಾಯಿತು. ಇಷ್ಟೇ ಅಲ್ಲದೇ ಈ ಶಾಲೆಯ ಹಳೆ ವಿದ್ಯಾರ್ಥಿಗಳಾದ ಬಿದ್ಕಲ್‌ಕಟ್ಟೆ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆಗೆ ಸಾಥ್ ನೀಡಿದ್ದರು.
ಶನಿವಾರ ಬಿದ್ಕಲ್‌ಕಟ್ಟೆ ಜಂಕ್ಷನ್ ಭಾಗದಿಂದ ಮೆರವಣಿಗೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಬಿದ್ಕಲ್‌ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಪ್ರತಿಭಟನಾಕಾರರು ಡಿಡಿಪಿಐ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಪಟ್ಟುಹಿಡಿದರು. ಬಿಸಿಲು ಮಳೆಯೆನ್ನದೇ ಸತತ ಮಧ್ಯಾಹ್ನದವರೆಗೂ ಮಕ್ಕಳು ಪ್ರತಿಭಟನೆ ನಡೆಸಿದ್ದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿಕ್ಷಣ ಇಲಾಖೆಯ ಬಿ.ಆರ್.ಪಿ. (ಸಮೂಹ ಸಂಪನ್ಮೂಲ ಅಧಿಕಾರಿ) ಉದಯ ಗಾಂವ್ಕರ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಇಲಾಖೆಯವರು ಶಿಕ್ಷಕಿಯರನ್ನು ವರ್ಗಾಯಿಸುವುದೇ ಹೌದಾದಲ್ಲಿ ಇಡೀ ಶಾಲೆಯ ಎಲ್ಲಾ ಮಕ್ಕಳು ತಮ್ಮ ವರ್ಗಾವಣೆಯ ಪ್ರಮಾಣಪತ್ರವನ್ನು ವಾಪಾಸು ಪಡೆಯುತ್ತಾರೆ. ಅಷ್ಟೇ ಅಲ್ಲದೇ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆಂದು ಆಗ್ರಹಿಸಿದರು.
ಕಳೆದ ವರ್ಷದ ಡೈಸ್ ಮಾಹಿತಿಯಲ್ಲಿನ ಆಧಾರದಲ್ಲಿ ಮಲೆನಾಡು ನಿಯಮದಂತೆ ಈ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷ ಈ ಶಾಲೆಯಲ್ಲಿ ಡೈಸ್ ಮಾಹಿತಿಯಲ್ಲಾದ ಲೋಪದಿಂದ ಈ ವರ್ಗಾವಣೆ ಆದೇಶ ಬಂದಿದೆ. ಇನ್ನೂ ಕೂಡ ಪ್ರಕ್ರಿಯೆ ನಡೆಯುತ್ತಿದ್ದು ಸೋಮವಾರದ ವೇಳೆಗೆ ಈ ವರ್ಗಾವಣೆ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಬರುತ್ತದೆ ಎಂದರು.
ಏನು ಶಾಲೆಯ ಸಮಸ್ಯೆ: ಬಿದ್ಕಲ್‌ಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-16 ನೇ ಸಾಲಿನಲ್ಲಿ 121 ಮಕ್ಕಳಿದ್ದು ಡೈಸ್ ಮಾಹಿತಿಯಲ್ಲಿ 119 ಮಕ್ಕಳೆಂದು ತಪ್ಪಾಗಿ ದಾಖಲಾಗಿತ್ತು. ವರ್ಗಾವಣೆಯ ಮಲೆನಾಡು ನಿಯಮದಂತೆ 61 ರಿಂದ 120 ಮಕ್ಕಳಿರುವ ಶಾಲೆಗಳಿಗೆ ಒಬ್ಬರು ಹೆಚ್ಚುವರಿ ಶಿಕ್ಷಕರು ಇರುತ್ತಾರೆ. 120 ಮಕ್ಕಳ ಸಂಖ್ಯೆಯಿರುವ ಶಾಲೆಗೆ 4 ಶಿಕ್ಷಕರಿರುತ್ತಾರೆ. 121 ಮಕ್ಕಳಿರುವ ಶಾಲೆಗೆ ನಿಯಮದ ಪ್ರಕಾರ 6 ಜನ ಶಿಕ್ಷಕರನ್ನು ನೀಡಬೇಕು. ಆದರೇ ಬಿದ್ಕಲ್‌ಕಟ್ಟೆ ಶಾಲೆಯ ಕಳೆದ ಬಾರಿಯ ಡೈಸ್ ಮಾಹಿತಿಯಲ್ಲಾದ ಲೋಪದಿಂದಾಗಿ 119 ಮಕ್ಕಳಿರುವ ಬಗ್ಗೆ ದಾಖಲಾಗಿದ್ದು ಹೆಚ್ಚುವರಿಯೆಂದು 2 ಶಿಕ್ಷಕರನ್ನು ವರ್ಗಾಯಿಸುತ್ತಿರುವುದು ವಾಸ್ತವ ಸಂಗತಿ. ಆದರೇ ಮಕ್ಕಳ ಸಂಖ್ಯೆ 121 ಆಗಿರುವ ಕಾರಣ ಇವರಿಬ್ಬರು ಹೆಚ್ಚುವರಿ ಶಿಕ್ಷಕರಲ್ಲ ಎನ್ನುವುದು ವಾಸ್ತವ.
ಬಿದ್ಕಲ್‌ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಕಳೆದೆರೆಡು ವರ್ಷಗಳಿಂದ ಆಂಗ್ಲಮಾಧ್ಯಮ ವಿಭಾಗವನ್ನು ಆರಂಭಿಸಿದ್ದಲ್ಲದೇ ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಎಲ್ಲಾ ವ್ಯವಸ್ಥೆ ನಡುವೆಯೇ ಈ ಬಾರಿಯ ಶೈಕ್ಷಣಿಕ ಆರಂಭವಾಗಿ ಎರಡು ತಿಂಗಳಾಗುತ್ತಲೇ ಶಾಲೆಯ ಎರಡು ಶಿಕ್ಷಕಿಯರನ್ನು ವರ್ಗಾವಣೆ ಮಾಡುವಂತೆ ಆದೇಶ ಬಂದಿದ್ದು, ಈ ಶಿಕ್ಷಕಿಯರ ಬದಲಿಗೆ ಅತಿಥಿ ಶಿಕ್ಷಕಿಯರನ್ನು ನಿಯೋಜಿಸುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೇ ಹಿಂದಿನ ಶಿಕ್ಷಕಿಯರೇ ನಮಗೆ ಬೇಕು ಎಂಬುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಗ್ರಹವಾಗಿದೆ.
ಬಿದ್ಕಲ್‌ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಾಂತಾರಾಮ ಮೊಗವೀರ, ಶಾಲೆಯ ಮೇಲುಸ್ತುವಾರಿ ನಾಮನಿರ್ದೇಶಿತ ಸದಸ್ಯ ಮನೋಜ್ ಕುಮಾರ್ ಶೆಟ್ಟಿ, ಕುಂದಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿ.ಪಂ. ಸದಸ್ಯೆ ಸುಪ್ರೀತಾ ಕುಲಾಲ್, ಮೊಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಲಾಲ್, ಹಾರ್ದಳ್ಳಿ-ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ರಾಜೀವಿ, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.
Comments are closed.