
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಶ್ರೀ ರಾಕೇಶ್ ಸಿದ್ದರಾಮಯ್ಯರವರ ಅಕಾಲಿಕ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.ರಾಕೇಶ್ ಸಾವು ತೀವ್ರ ಆಘಾತದ ವಿಚಾರ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಗಣ್ಯರು ಸಿಎಂ ಪುತ್ರನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಶ್ರೀ ರಾಕೇಶ್ ಸಿದ್ದರಾಮಯ್ಯರವರ ನಿಧನದ ಸುದ್ದಿ ತಿಳಿದು ಆಘಾತವಾಯಿತು. ಶ್ರೀ ರಾಕೇಶ್ ಸಿದ್ದರಾಮಯ್ಯರವರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಸಿದ್ದರಾಮಯ್ಯನವರಿಗೆ ಹಾಗೂ ಅವರ ಕುಟುಂಬದವರಿಗೂ ಕರುಣಿಸಲಿ ಎಂದು ಬೇಡುತ್ತಾ ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ ಎಂದು ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ನಾಳೆ ಸಂಜೆ ರಾಕೇಶ್ ಪಾರ್ಥಿವ ಶರೀರ ಬೆಂಗಳೂರಿಗೆ :
ಬೆಂಗಳೂರು: ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೇಷ್ಠ ಪುತ್ರ ರಾಕೇಶ್(39) ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು (ಶನಿವಾರ) ನಿಧನರಾಗಿದ್ದಾರೆ.
ಕಳೆದ ಒಂದು ವಾರದಿಂದ ಬೆಲ್ಜಿಯಂನ ಬ್ರಷಲ್ಸ್ ನ ಆಂಟ್ ವರ್ಪ್ ಯೂನಿರ್ವಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ 39 ವರ್ಷದ ರಾಕೇಶ್ ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಎರಡು ದಿನಗಳ ಹಿಂದಷ್ಟೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪುತ್ರನ ಆರೋಗ್ಯ ವಿಚಾರಿಸಲು ಬೆಲ್ಜಿಯಂಗೆ ತೆರಳಿದ್ದರು. ವಿಶೇಷ ವಿಮಾನದ ಮೂಲಕ ನಾಳೆ ಸಂಜೆ ರಾಕೇಶ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.
Comments are closed.