ಕರಾವಳಿ

ಮಹದಾಯಿ ತೀರ್ಪು ವಿರೋಧಿಸಿ ಚಿತ್ರರಂಗದ ದಿಗ್ಗಜರಿಂದ ಪ್ರತಿಭಟನೆ : ಬಾರೀ ನೂಕು-ನುಗ್ಗಲು

Pinterest LinkedIn Tumblr

Film_actor_Protest

ಬೆಂಗಳೂರು, ಜು.30 : ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೀರ್ಪು ಖಂಡಿಸಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಚಿತ್ರೋದ್ಯಮದ ಗಣ್ಯಾತಿಗಣ್ಯರು ಇಂದು ಬೀದಿಗಿಳಿದು ಹೋರಾಟ ನಡೆಸಿದರು.

ಕನ್ನಡಪರ ಸಂಘಟನೆಗಳು ಕರೆಕೊಟ್ಟಿದ್ದ ಕರ್ನಾಟಕ ಬಂದ್‍ನಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಹಿರಿಯ ನಟ ಶಿವರಾಜ್‍ಕುಮಾರ್ ಅವರ ನೇತೃತ್ವದಲ್ಲಿ ಭಾಗವಹಿಸಿದ್ದ ತಾರಾ ಬಳಗ ಟೌನ್‍ಹಾಲ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬೆಂಬಲ ವ್ಯಕ್ತಪಡಿಸಿತು.

ಚಿತ್ರರಂಗದ ದಿಗ್ಗಜರಾದ ಭಾರತಿ ವಿಷ್ಣುವರ್ಧನ್, ಜಯಂತಿ, ಹೇಮಾ ಚೌಧರಿ, ಶೃತಿ, ಶಿವರಾಂ, ಜೈ ಜಗದೀಶ್, ದೇವರಾಜ್, ಬಿ.ಸಿ.ಪಾಟೀಲ್, ರಮೇಶ್ ಅರವಿಂದ್, ಜಗ್ಗೇಶ್, ರಂಗಾಯಣ ರಘು, ನಾಯಕ ನಟರಾದ ಪುನೀತ್ ರಾಜ್‍ಕುಮಾರ್, ಪ್ರೇಮ್, ಯಶ್, ಗಣೇಶ್, ಪ್ರಜ್ವಲ್, ಚಿರಂಜೀವಿ ಸರ್ಜ, ರವಿಶಂಕರ್, ಪಂಕಜ್, ಅನಿರುದ್ಧ್ ಸೇರಿದಂತೆ ಅನೇಕ ನಟ-ನಟಿಯರು, ಕಿರುತೆರೆ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ಚಿತ್ರೋದ್ಯಮದ ಗಣ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು. ಟೌನ್‍ಹಾಲ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಚಿತ್ರೋದ್ಯಮದ ಗಣ್ಯರು ಪಾಲ್ಗೊಂಡಿದ್ದರಿಂದ ಅವರನ್ನು ನೋಡಲು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕು-ನುಗ್ಗಲು ಉಂಟಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ನಾಯಂಡಳ್ಳಿ ಮೆಟ್ರೋ ಸ್ಟೇಷನ್’ಗೆ ಮುತ್ತಿಗೆ ಹಾಕಿದ್ದಾರೆ. 6 ಗಂಟೆಗೆ ಪ್ರಾರಂಭವಾಗಬೇಕಿದ್ದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ರೈಲನ್ನೂ ಕರವೇ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೂರಾರು ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಮೆಟ್ರೋ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಮೂಲಕ ನಗರದಲ್ಲಿ ಸಂಚರಿಸಬೇಕಾದವರು ಇನ್ನಷ್ಟು ಪರದಾಡುವಂತಾಗಿದೆ.

Comments are closed.