ಧಾರವಾಡ: ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಮಧ್ಯಂತರ ತೀರ್ಪು ಖಂಡಿಸಿ ಧಾರವಾಡದ ನವಲಗುಂದದ ಯಮನೂರ ಗ್ರಾಮದಲ್ಲಿ ನಡೆದ ಬಂದ್ ಸಂದರ್ಭ ಪೊಲೀಸರು ಪ್ರತಿಭಟನಕಾರರೊಂದಿಗೆ ದಬ್ಬಳಿಕೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಬಂದ್ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮುದುಕರು, ಮಹಿಳೆಯರ ಮೇಲೆ ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ.
ಪೊಲೀಸ್ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ .ಜಿ. ಪರಮೇಶ್ವರ್ ಅವರು ಮಹಿಳೆಯರ,ವೃದ್ಧರ ಮೇಲೆ ಹಲ್ಲೆ ನಡೆಸಿದುದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಪೊಲೀಸರು ಸಂಯಮ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಯಡಿಯೂರಪ್ಪ ಖಂಡನೆ :
ಯಮನೂರಿನಲ್ಲಿ ಮನೆಯಲ್ಲಿ ಗಂಡಸರು ಇಲ್ಲದ ಮೇಲೆ ಮನೆಗೆ ನುಗ್ಗಿ ಮಹಿಳೆ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ ಪೊಲೀಸರ ದರ್ಪವನ್ನು ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ. ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದರೂ ಉನ್ನತ ಪೊಲೀಸ್ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಸರಕಾರ ಬದುಕಿದೆಯಾ? ಸತ್ತಿದೆಯಾ? ಎಂಬುದೂ ಗೊತ್ತಾಗುತ್ತಿಲ್ಲ. ಪೊಲೀಸರು ದೌರ್ಜನ್ಯ ನಿಲ್ಲಿಸಿ ಶಾಂತಿಯುತವಾದ ಬಂದ್‍ಗೆ ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮನೆ ಮನೆಗೆ ನುಗ್ಗಿ ರೈತರ ಮೇಲೆ ಪೊಲೀಸರಿಂದ ಥಳಿತ
ಧಾರವಾಡ : ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟವನ್ನು ಹತ್ತಿಕ್ಕಲು ಸರಕಾರ ಖಾಕಿ ದರ್ಪವನ್ನು ಉಪಯೋಗಿಸುತ್ತಿರುವಂತಿದೆ. ಕಳಸಾ ಬಂಡೂರಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನವಲಗುಂದ ತಾಲೂಕಿನ ಗ್ರಾಮಗಳ ಮೇಲೆ ಖಾಕಿ ಆಕ್ರಮಣ ನಡೆಯುತ್ತಿದೆ.
ಯಮನೂರು, ಹಳಗವಾಡಿ, ಹೆಬಸೂರು ಮೊದಲಾದ ಗ್ರಾಮಗಳಲ್ಲಿ ಪೊಲೀಸರು ಮನೆಮನೆಗೆ ನುಗ್ಗಿ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ಅಮಾನವೀಯ ಸಂಗತಿ ವರದಿಯಾಗಿದೆ. ಮಹಿಳೆಯರು, ವೃದ್ಧರು ಎಂಬುದನ್ನೂ ಲೆಕ್ಕಿಸದೆ ಮನಸೋಯಿಚ್ಛೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಪೊಲೀಸರಿಗೆ ರೈತರು ಹೆದರಿ ಮನೆ ಬಿಟ್ಟು ಹೊಲಗಳಲ್ಲಿ ಅಡಗಿಕೊಂಡಿರುವ ಹಾಗೂ ವೃದ್ಧರು, ಮಹಿಳೆಯರು ಅಳುತ್ತಿರುವ ಘೋರ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿದೆ. ಬ್ರಿಟಿಷರ ಕಾಲದಲ್ಲೂ ಇಷ್ಟು ಪ್ರಮಾಣದಲ್ಲಿ ಅಮಾನವೀಯತೆ ವ್ಯಕ್ತವಾಗಿದ್ದಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ.
ಖಾಕಿ ದೌರ್ಜನ್ಯ : ದರ್ಪ ತೋರುತ್ತಿದೆ ಖಾಕಿ ಪಡೆ :
ಕಳಸಾ ಬಂಡೂರಿ ನಾಲೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವು ಈ ಭಾಗದಲ್ಲಿ ತೀವ್ರವಾಗಿದೆ. ಮೊನ್ನೆ ನಡೆದ ಕರ್ನಾಟಕ ಬಂದ್ ವೇಳೆ ಈ ಭಾಗದಲ್ಲೇ ಹೆಚ್ಚು ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಹೋರಾಟಗಾರರ ಕೆಚ್ಚನ್ನು ಹೇಗಾದರೂ ಅಡಗಿಸಬೇಕೆಂಬ ಸೂಚನೆಯನ್ನು ಪೊಲೀಸರಿಗೆ ಸರಕಾರವೇ ನೀಡಿರುವಂತಿದೆ.
ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ರೈತರಿಗೆ ಸವಾಲು ಹಾಕಿಯೇ ಖಾಕಿ ಪಡೆಗಳು ಗ್ರಾಮಗಳಲ್ಲಿ ಮೊಕ್ಕಾಂ ಹೂಡಿವೆ. ಮನೆ ಮನೆಗೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಪೊಲೀಸರ ತಾಕತ್ತು ಏನೆಂಬುದನ್ನು ರೈತರಿಗೆ ತೋರಿಸಿ ಎಂದು ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಅವರೇ ಖುದ್ದಾಗಿ ಸೂಚನೆ ನೀಡಿದ್ದಾರೆನ್ನಲಾಗಿದೆ.
ಖಾಕಿ ದೌರ್ಜನ್ಯದ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಯಮನೂರು ಗ್ರಾಮದ ರೈತರು ತಾವು ಇಂಥದ್ದಕ್ಕೆ ಬೆದರುವುದಿಲ್ಲ. ತಮ್ಮ ಹೋರಾಟ ಮುಂದುವರಿಯುವುದು ಎಂದು ಹೇಳಿದ್ದಾರೆ.


Comments are closed.