ಕರಾವಳಿ

ಕರ್ನಾಟಕ ಬಂದ್‌ಗೆ ಹಲವೆಡೆ ಉತ್ತಮ ಪ್ರತಿಕ್ರಿಯೆ :ಮಹದಾಯಿ ನ್ಯಾಯಾಧೀಕರಣದ ತೀರ್ಪಿಗೆ ವ್ಯಾಪಕ ಆಕ್ರೋಶ

Pinterest LinkedIn Tumblr

Karnataka-Bund1

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉತ್ತರ ಕರ್ನಾಟಕದ ಜನರ ನೀರಿನ ಹಾಹಾಕಾರದ ಕೂಗಿಗೆ ಇತರ ಭಾಗದ ಕನ್ನಡಿಗರೂ ಸ್ಪಂದಿಸಿದ್ದಾರೆ. ಮೊನ್ನೆಯ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಕರಾವಳಿ ಭಾಗದಲ್ಲಿ ಇವತ್ತು ಬೆಂಬಲ ವ್ಯಕ್ತವಾಗಿರುವುದು ಗಮನಾರ್ಹ. ರಾಜಧಾನಿ ಬೆಂಗಳೂರು, ಹಾಸನ, ಮಂಡ್ಯ, ತುಮಕೂರು, ಮೈಸೂರಿನಲ್ಲೂ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿರುವುದು ವರದಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿಯಲ್ಲಿ ಹೋರಾಟ ಜೋರಾಗಿದೆ.

ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಸ್ ಮತ್ತು ರೈಲು ಸಂಚಾರ ಸ್ಥಗಿತಗೊಂಡಿದೆ. ಅನೇಕ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿವೆ. ಹಲವು ಕಡೆ ಕನ್ನಡ ಸಂಘಟನೆಯ ಕಾರ್ಯಕರ್ತರು ಟೈರ್’ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರಕಾರ ಕೆಲವಾರು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ರಾಜ್ಯಾದ್ಯಂತ 15 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಗಳ ಉಸ್ತುವಾರಿಯನ್ನ ಎಡಿಜಿಪಿ ಅಧಿಕಾರಿಗಳು ವಹಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿ-ಧಾರವಾಡ, ನರಗುಂದ, ನವಲಗುಂದದಲ್ಲಿ ಅರೆ ಸೇನಾ ತುಕಡಿಗಳು ಗಸ್ತು ತಿರುಗುತ್ತಿವೆ. ಗದಗದಲ್ಲಿ 120 ಜನರ 1 ಬೆಟಾಲಿಯನ್ ಬಿಎಸ್‌ಎಫ್ ಪಡೆಯನ್ನ ನಿಯೋಜಿಸಲಾಗಿದೆ. ಇನ್ನೂ ಬಂದ್ ವೇಳೆ ಎಲ್ಲಾದರೂ ಅಹಿತರಕ ಘಟನೆ ನಡೆದರೆ ಪೊಲೀಸರೇ ಜವಾಬ್ದಾರರೆನಿಸುತ್ತಾರೆ. ಅವಳಿ ನಗರದಲ್ಲಿ ಹೈಅಲರ್ಟ್ ಕೂಡ ಷೋಷಿಸಿದ್ದು, ಸೋಮವಾರದವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ..

ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಸ್ ಸಂಚಾರ ಸೇರಿದಂತೆ ಇನ್ನಿತರ ಸೌಲಭ್ಯಗಳು ಇರುವುದಿಲ್ಲ. ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಬಂದ್ ಗೆ ಬೆಂಬಲ ನೀಡಿದ್ದು, ಶಾಲಾ ಕಾಲೇಜುಗಳು ಬಂದ್ ಆಗಲಿವೆ.

ಕನ್ನಡ ಸಂಘಟನೆಗಳಿಂದ ಪ್ರತಿಭಟನೆ:

ಮಹದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ, ರಾಜ್ಯಾದ್ಯಂತ ಬಂದ್, ಹೋರಾಟ ನಡೆಯುತ್ತಿದ್ದು, ವಿವಿಧ ಕಡೆಗಳಲ್ಲಿ ಸಂಪೂರ್ಣ ಬಂದ್ ಆಗಿದೆ. ಬೆಳಿಗ್ಗೆಯಿಂದಲೇ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಮಹದಾಯಿ ನದಿ ವಿವಾದದಲ್ಲಿ ಕೋರ್ಟ್’ನಿಂದ ಕರ್ನಾಟಕ್ಕೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿ ವಿವಿಧ ಸಂಘಟನೆಗಳು ಕರೆಕೊಟ್ಟಿರುವ ಬಂದ್’ಗೆ ರಾಜಧಾನಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಮಹದಾಯಿ ವಿಚಾರವಾಗಿ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ ವಿನಹ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೆಲವರು ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರು ಎಂ.ಜಿ.ರಸ್ತೆಯಲ್ಲಿ ಆಗಸ್ಟಿನ್ ಎಂಬುವವರು ಡ್ಯಾನ್ಸ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಕತ್ತೆಗಳ ಮೆರವಣಿಗೆ ಮಾಡಿ, ರಸ್ತೆ ತಡೆ ನಡೆಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ನಾಯಂಡಳ್ಳಿ ಮೆಟ್ರೋ ಸ್ಟೇಷನ್’ಗೆ ಮುತ್ತಿಗೆ ಹಾಕಿದ್ದಾರೆ. 6 ಗಂಟೆಗೆ ಪ್ರಾರಂಭವಾಗಬೇಕಿದ್ದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ರೈಲನ್ನೂ ಕರವೇ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೂರಾರು ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಮೆಟ್ರೋ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಮೂಲಕ ನಗರದಲ್ಲಿ ಸಂಚರಿಸಬೇಕಾದವರು ಇನ್ನಷ್ಟು ಪರದಾಡುವಂತಾಗಿದೆ.

ಅದೇ ರೀತಿ ಚಿಕ್ಕಮಗಳೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿದ ಹೋರಾಟಗಾರರು, ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿದ್ದಾರೆ. ಬಳ್ಳಾರಿ ಸೇರಿದಂತೆ ಕೆಲವು ಕಡೆಗಳಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಲಾಗಿದೆ. ಧಾರವಾಡದಲ್ಲಿ ಅಣಕು ಶವಯಾತ್ರೆ ನಡೆಸಲಾಗಿದೆ. ಬೆಂಗಳೂರು ಮೆಜೆಸ್ಟಿಕ್ ನಲ್ಲಿ ಕ್ರಿಕೆಟ್ ಆಡಿ ಪ್ರತಿಭಟಿಸಿದರೆ, ಕೆಲವರು ಯೋಗ, ನಿದ್ದೆ ಮಾಡಿ ಪ್ರಧಾನಿ ಮತ್ತು ಮುಖ್ಯಮಂತ್ರಿಯವರ ಅಣಕು ಪ್ರದರ್ಶನ ನಡೆಸಿದ್ದಾರೆ. ಒಟ್ಟಾರೆ ಮಹದಾಯಿ ನ್ಯಾಯಾಧೀಕರಣದ ತೀರ್ಪಿಗೆ ಆಕ್ರೋಶ ಹೆಚ್ಚಾಗಿದೆ.

Comments are closed.