ಬೆಂಗಳೂರು: 2015ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಬಾಕಿ ಉಳಿದಿದ್ದ ಡಾ. ರಾಜ್ಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಪ್ರಶಸ್ತಿಗಳನ್ನು ಕ್ರಮವಾಗಿ ಹಿರಿಯ ನಟಿ ಹರಿಣಿ, ಸಂಗೀತ ನಿರ್ದೇಶಕ ರಾಜನ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪಡೆದುಕೊಂಡಿದ್ದಾರೆ.
ಹಿರಿಯ ನಿರ್ದೇಶಕ ಭಗವಾನ್ ನೇತೃತ್ವದ ಸಮಿತಿ ಈ ಮೂವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಗಳು 2 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ನಾಣ್ಯವನ್ನು ಒಳಗೊಂಡಿರುತ್ತವೆ.
1950ರಿಂದ 1970ರವರೆಗೆ 29ಕ್ಕೂ ಹೆಚ್ಚು ಚಿತ್ರಗಳಲ್ಲಿ ಹರಿಣಿ ನಟಿಸಿದ್ದಾರೆ. ‘ಜಗನ್ಮೋಹಿನಿ’ ಚಿತ್ರದಿಂದ ಖ್ಯಾತಿ ಪಡೆದ ಅವರು, ಡಾ. ರಾಜ್ ಜತೆ 10ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂದಾದೀಪ, ನಾಂದಿ, ಕನ್ಯಾದಾನ ಅವುಗಳಲ್ಲಿ ಪ್ರಮುಖವಾದವು. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ 370ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ ಕೀರ್ತಿ ಸಂಗೀತ ನಿರ್ದೇಶಕ ರಾಜನ್ ಅವರದು. ಸಹೋದರ ನಾಗೇಂದ್ರ ಅವರ ಜತೆಗೂಡಿ ರಾಜನ್ ಸಂಗೀತ ನೀಡುತ್ತಿದ್ದರು.
‘ಕಾಡಿನ ಬೆಂಕಿ’ ಚಿತ್ರದ ಮೂಲಕ ಬರಹಗಾರರಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಾಗತಿಹಳ್ಳಿ ಚಂದ್ರಶೇಖರ್ ಅವರು, ‘ಉಂಡು ಹೋದ ಕೊಂಡು ಹೋದ’ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ಅವರ ‘ಕೋಟ್ರೇಶಿ ಕನಸು’, ‘ಅಮೆರಿಕ ಅಮೆರಿಕ’, ‘ಹೂಮಳೆ’ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.
Comments are closed.