ಕರಾವಳಿ

ಅಧಿಕ ರಕ್ತದೊತ್ತಡ ನಿಯಂತ್ರಣ ಸೇರಿದಂತೆ ಉತ್ತಮ್ಮ ಆರೋಗ್ಯಕ್ಕಾಗಿ ಈ ಆಹಾರಕ್ರಮಗಳನ್ನು ಪಾಲಿಸಿ..

Pinterest LinkedIn Tumblr

Healthi-Food_1

ಮಂಗಳೂರು : ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್ – BP) ದಿಂದ ಬಳಲುತ್ತಿದ್ದಾರೆ ಇದನ್ನು ನಾವು ಅನುಸರಿರುವ ಕೆಲವೊಂದು ಆಹಾರಕ್ರಮಗಳಿಂದ ಸುಲಭವಾಗಿ ನಿಯಂತ್ರಣಕ್ಕೆ ತರಬಹುದು. ಬಹಳಷ್ಟು ಕಾಯಿಲೆಗಳು ಬರುವುದು ನಮ್ಮ ಆಹಾರ ಕ್ರಮಗಳಿಂದಲೇ.ಹಲವು ಕಾಯಿಲೆಗಳನ್ನು ನಮ್ಮ ಆಹಾರ ಕ್ರಮಗಳಿಂದಲೇ ನಿಯಂತ್ರಣಕ್ಕೆ ತರುವುದು ಅನಿವಾರ್ಯವಾಗಿದೆ.ಹೀಗಾಗಿ ಯಾವುದಾದರೊಂದು ಕಾಯಿಲೆ ಬಾಧಿಸಿದಾಗ ಅದಕ್ಕೆ ಚಿಕಿತ್ಸೆ ಪಡೆಯುವುದರೊಂದಿಗೆ ವೈದ್ಯರು ನೀಡುವ ಆಹಾರ ಸೇವನೆಯ ಸಲಹೆಗಳನ್ನು ಅಗತ್ಯವಾಗಿ ಪಾಲಿಸಬೇಕಾಗುತ್ತದೆ.

ಮಧುಮೇಹ ಇರುವವರು ಹೇಗೆ ಆಹಾರ ಸೇವನೆಯಲ್ಲಿ ಪಥ್ಯಕ್ರಮವನ್ನು ಅನುಸರಿಸಬೇಕೋ ಹಾಗೆಯೇ ಅಧಿಕ ರಕ್ತದೊತ್ತಡ(ಹೈಪರ್ ಟೆನ್ಷನ್)ದಿಂದ ಬಳಲುತ್ತಿರುವವರು ಕೂಡ ವೈದ್ಯರು ನೀಡುವ ಔಷಧಿಯೊಂದಿಗೆ ದಿನನಿತ್ಯ ಸೇವಿಸುವ ಆಹಾರಗಳಲ್ಲಿಯೂ ನಿಗಾ ವಹಿಸುವುದು ಅಗತ್ಯವಾಗಿದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಏನು ಮಾಡಬೇಕು? ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಯಾವುದನ್ನು ಬಳಸಬೇಕು? ಯಾವುದನ್ನು ವರ್ಜಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದು, ಅದರಂತೆ ಕಟ್ಟು ನಿಟ್ಟಾಗಿ ಪಾಲಿಸಿದ್ದೇ ಆದರೆ ರೋಗವನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ.

ವೈದ್ಯರ ಪ್ರಕಾರ ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಆದರೆ ಸೇವಿಸುವ ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳದಂತಹ ಧಾನ್ಯಗಳಿಗೆ ಪ್ರಾಧಾನ್ಯತೆಯಿರಲಿ. ಆದರೆ ಮಿತವಾಗಿರಬೇಕು. ದಿನಕ್ಕೆ 180 ಗ್ರಾಂ.ನಿಂದ 240ಗ್ರಾಂ.ನಷ್ಟಿದ್ದರೆ ಸಾಕು.

ನಾರಿನಾಂಶ, ಜೀವಸತ್ವ, ಖನಿಜಾಂಶವುಳ್ಳ ಹಣ್ಣು ತರಕಾರಿಗಳನ್ನು ದಿನಕ್ಕೆ ಮುನ್ನೂರರಿಂದ ಐನೂರು ಗ್ರಾಂನಷ್ಟು ಸೇವಿಸಬಹುದು. ಕ್ಯಾಲ್ಸಿಯಂ ಹೊಂದಿದ ಕಡಿಮೆ ಕೊಬ್ಬಿನಂಶವುಳ್ಳ ಹಾಲು, ಮೊಸರು ಚೀಸ್ ಸೇವಿಸಬಹುದು. ಇನ್ನು ಕೆನೆತೆಗೆದ 200 ರಿಂದ 300ಮಿ.ಲೀ ಹಾಲು ಮತ್ತು ಮೊಸರನ್ನು ಸೇವಿಸಬಹುದಾಗಿದೆ.ಸುಮಾರು 50ರಿಂದ 100 ಗ್ರಾಂನಷ್ಟು ಚರ್ಮ ತೆಗೆದ ಕೋಳಿ ಮಾಂಸ ಮೀನು, ಮೊಟ್ಟೆಯ ಬಿಳಿಭಾಗವನ್ನು ಮಾಂಸಹಾರಿಗಳು ಸೇವಿಸಬಹುದು. ಕೊಬ್ಬಿಲ್ಲದ ಮಾಂಸವನ್ನು ಸೇವಿಸಬಹುದು.

ಆದರೆ ಮಾಂಸವನ್ನು ಅಪರೂಪಕ್ಕೆ ಸೇವಿಸುವುದು ಒಳ್ಳೆಯದು. ಮೆಗ್ನೀಷಿಯಂ, ಪೊಟ್ಯಾಷಿಯಂ ಹಾಗೂ ನಾರಿನ ಅಂಶವನ್ನು ಹೊಂದಿರುವ ಕಡ್ಲೆಕಾಯಿ, ಬಾದಾಮಿ ಮೊದಲಾದವುಗಳನ್ನು ವಾರಕ್ಕೆ 45ಗ್ರಾಂ.ನಷ್ಟು ಸೇವಿಸಿದರೆ ಸಾಕು. ಬಾಯಿ ರುಚಿಗೆ ಅಧಿಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ.

ಹಣ್ಣು, ತರಕಾರಿ, ಬೇಳೆಯ ಸೂಪ್, ಎಳನೀರನ್ನು ಸೇವಿಸುವುದು ಒಳ್ಳೆಯದು. ಉಪ್ಪು ಸೇರಿಸಿದ ಬೆಣ್ಣೆ ತ್ಯಜಿಸಿ, ಉಪ್ಪು ಬೆರೆಸದ ಬೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಬಹುದು. ಇನ್ನು ಅಡುಗೆಗೆ ಉಪ್ಪು ಹಾಕುವ ಬದಲಿಗೆ ಊಟ ಮಾಡುವಾಗ ಅಲ್ಪ ಪ್ರಮಾಣದಲ್ಲಿ ಉಪ್ಪನ್ನು ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ.ಕೆಲವರಿಗೆ ಮೇಲುಪ್ಪು ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಅಂತಹವರು ಅದನ್ನು ಬಿಟ್ಟು ಬಿಡಬೇಕು. ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿರುವ ಎಣ್ಣೆಗಳನ್ನು ವರ್ಜಿಸಬೇಕು.

ಕೊಲೆಸ್ಟ್ರಾಲ್ ಕಡಿಮೆಯಿರುವ ಎಣ್ಣೆಯನ್ನು 2ರಿಂದ 3 ಟೀ ಚಮಚೆಯಷ್ಟು ಬಳಸುವುದು ಒಳ್ಳೆಯದು. ಕರಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಬೇಕು. ಸಾಸ್, ಮಸಾಲ, ಚಾಟ್ ಸೇರಿದಂತೆ ಸಿದ್ಧ ಮಸಾಲೆಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆಹಾರದಲ್ಲಿ ಹುಳಿ ಅಂಶಕ್ಕಾಗಿ ನಿಂಬೆಹಣ್ಣು, ವಿನಿಗರ್, ಹುಣಸೆ, ಮಾವಿನ ತುರಿಯನ್ನು ಬಳಸಬಹುದು.

ಉಪ್ಪಿನಿಂದ ಸಂಸ್ಕರಿಸಿದ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಮೊದಲಾದ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಅಡುಗೆ ಸೋಡಾ ಸೇರಿದಂತೆ ಸೋಡಾವಾಟರ್, ಪೆಪ್ಸಿ, ಕೋಲಾದಂತಹ ಜ್ಯೂಸ್ ಗಳನ್ನು ಉಪಯೋಗಿಸದೆ ತಾಜಾ ಹಣ್ಣಿನ ಜ್ಯೂಸ್ ಗಳಿಗೆ ಆದ್ಯತೆ ನೀಡಬೇಕು. ಹೀಗೆ ಒಂದಷ್ಟು ಆಹಾರಗಳ ಸೇವನೆಯಲ್ಲಿ ಮಾರ್ಪಾಡು ಮತ್ತು ಎಚ್ಚರಿಕೆಯನ್ನು ವಹಿಸಿದ್ದೇ ಆದರೆ ಅಧಿಕ ರಕ್ತದೊತ್ತದ ನಿಯಂತ್ರಣ ಸಾಧ್ಯವಾಗುತ್ತದೆ. ಸೋ ಅಧಿಕ ರಕ್ತದೊತ್ತಡ ಅಥವಾ ಇನ್ನಿತರ ಯಾವೂದೇ ಅನಾರೋಗ್ಯ ಸಮಸೈಯಿಂದ ಬಳಲುತ್ತಿರುವವರು ಇಂದಿನಿಂದಲೇ ಆಹಾರ ಸೇವನೆಯ ಕ್ರಮಗಳನ್ನು ಅರಿತುಕೊಂಡು ವೈದ್ಯರು ನೀಡುವ ಔಷಧಿಯೊಂದಿಗೆ ದಿನನಿತ್ಯ ಸೇವಿಸುವ ಆಹಾರಗಳಲ್ಲಿಯೂ ನಿಗಾ ವಹಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments are closed.