ಬೆಂಗಳೂರು, ಜುಲೈ. 29: ಬೆಂಗಳೂರಿನಲ್ಲಿ ಗುರುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಗೊಂಡಿದೆ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದ್ದು, ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಬಹುತೇಕ ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ.
ಅನೇಕ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ. ಮಳೆಯಿಂದಾಗಿ 16 ಕಡೆ ಹಾನಿಯಾಗಿದೆ. ಹೆಚ್‌ಎಎಲ್’ನಲ್ಲಿ ಕಾಂಪೌಂಡ್ ಬಿದ್ದು 20 ವಾಹನಗಳು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ 16 ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬಾಣಸವಾಡಿಯ ಅಪಾರ್ಟ್’ಮೆಂಟ್’ವೊಂದರಲ್ಲಿ ಪಿಲ್ಲರ್ ಬಿರುಕು ಬಿಟ್ಟಿದ್ದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಅರೆಕೆರೆ ಕೋಡಿ ಚಿಕ್ಕನಹಳ್ಳಿ ಬಳಿ ಕೆರೆಕೋಡಿ ಬಿದ್ದು ಸುತ್ತಮುತ್ತಲ ಮನೆಗೆ ನೀರು ನುಗ್ಗಿದೆ.
ಬೆಂಗಳೂರಿನ ಕೆಂಗೇರಿ, ಬಾಪೂಜಿನಗರ, ಬಿಳೇಕಹಳ್ಳಿ, ಶಿವಾಜಿನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮೈಸೂರು ರಸ್ತೆಯಿಂದ ಸಿಟಿ ಮಾರುಕಟ್ಟೆ ಸಂಪರ್ಕಿಸುವ ಶ್ರೀ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ಸೇರಿದಂತೆ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ 2 ರಿಂದ 3 ಅಡಿಗಳಷ್ಟು ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಇನ್ನು ನಾಯಂಡಹಳ್ಳಿ ಸಮೀಪ ರಸ್ತೆ ಮಧ್ಯೆ ನೀರಿನಲ್ಲಿ ಕಾರೊಂದು ಕೆಟ್ಟು ನಿಂತ ಪರಿಣಾಮ ಬೆಳ್ಳಂಬೆಳಗ್ಗೆಯೇ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಮಳೆ ನಡುವೆಯೇ ವಾಹನ ಸವಾರರು ಪರದಾಡುವಂತಾಗಿತ್ತು.
ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ತತ್ತರಿಸಿದೆ. ಹೆಬ್ಬಗೋಡಿಯ ವಿನಾಯಕನಗರ, ತಿರುಪಾಳ್ಯ,ಗೊಲ್ಲಹಳ್ಳಿಂದ ಬಂದ ನೀರು ನೇರವಾಗಿ ಮನೆಗಳಿಗೆ ನುಗ್ಗಿ ತೀವ್ರ ಅನಾಹುತವುಂಟು ಮಾಡಿದೆ. ಹೆಬ್ಬಗೋಡಿಯ ರಾಜಕಾಲುವೆಗಳ ಒತ್ತುವರಿಯಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಹಲವು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಗಮನಹರಿಸದ ಪರಿಣಾಮ ಇಂದು ಜನರು ಪರದಾಡುವಂತಾಗಿದೆ. ಇದೀಗ ಸ್ಥಳಕ್ಕೆ ಬಂದಿರುವ ನಗರಸಭೆ ಅಧಿಕಾರಿಗಳು ಜೆಸಿಬಿಗಳ ಮುಖಾಂತರ ನೀರು ತೆರವುಗೊಳಿಸಲು ಹರಸಾಹಸ ಮಾಡುತ್ತಿದ್ದಾರೆ.
ಇನ್ನು ಬೆಂಗಳೂರು ಹೊರವಲಯದ ಬಿಳೇಕಹಳ್ಳಿ ಸಮೀಪದ ಕೋಡಿ ಚಿಕ್ಕನಹಳ್ಳಿ ಕೆರೆ ಭರ್ತಿಯಾಗಿ ಉಕ್ಕಿಹರಿದ ಪರಿಣಾಮ ಸಮೀಪದ ಸುಮಾರು 10ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದೆ. ವಸತಿ ಸಂಕೀರ್ಣಗಳ ಬೇಸ್ ಮೆಂಟ್ ನಲ್ಲಿ ಸುಮಾರು 3 ರಿಂದ 4 ಅಡಿಗಳಷ್ಟು ನೀರು ನುಗ್ಗಿದೆ. ಹೀಗಾಗಿ ಬೆಳಗ್ಗೆ ಸ್ಥಳೀಯ ನಿವಾಸಿಗಳು ನೀರಿನ ನಡುವೆಯೇ ತಮ್ಮ ನಿತ್ಯ ಕಾರ್ಯಗಳನ್ನು ಮಾಡುವಂತಾಗಿತ್ತು.ಬಾಪೂಜಿನಗರ ಸಮೀಪವಿರುವ ವೃಷಭಾವತಿ ರಾಜಾಕಾಲುವೆ ತುಂಬಿ ಹರಿಯುತ್ತಿದ್ದು, ಸಮೀಪ ಕೊಳಗೇರಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯೂ ರಾಜಾಕಾಲುವೆ ತುಂಬಿ ಹರಿಯುತ್ತಿದೆ.
ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ನೀರಿನ ಮಧ್ಯೆ ಸಿಲುಕಿದ್ದ ಮಂದಿ ಹೊರಬರಲಾಗದೇ ಪರಿತಪಿಸುತ್ತಿದ್ದ ಪ್ರಸಂಗಗಳೂ ನಡೆದಿವೆ. ಹೀಗಾಗಿ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ನೀರಿನ ಮಧ್ಯೆ ಸಿಲುಕಿದ್ದ ಮಂದಿಯನ್ನು ಯಾಂತ್ರಿಕ ಬೋಟ್ ಗಳ ನೆರವಿನಿಂದ ರಕ್ಷಿಸಿದ್ದಾರೆ.
ಸಹಾಯಕ್ಕಾಗಿ ಸಂಪರ್ಕಿಸಿ : ಮಳೆಯಿಂದಾಗಿ ನಿನ್ನ ಪ್ರದೇಶದಲ್ಲಿ ನೀರು ಸ್ಥಗಿತಗೊಂಡಿರುವುದು, ಮರ ಬಿದ್ದಿರುವುದು ಇತ್ಯಾದಿ ಸಮಸ್ಯೆಗಳುಂಟಾಗಿದ್ದಲ್ಲಿ ಬಿಬಿಎಂಪಿಯ ದೂರವಾಣಿ ಸಂಖ್ಯೆ 080 – 222211188.ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು:
Comments are closed.